ರಾಣಿಬೆನ್ನೂರು: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಪ್ರಾದೇಶಿಕವಾಗಿ ಸ್ಮರಿಸುವ ನಿಟ್ಟಿನಲ್ಲಿ ಸ್ಥಳೀಯರ ಅಭಿಮಾನ ಮತ್ತು ಸಹಕಾರ ಅತ್ಯವಶ್ಯ. ಈ ಹಿನ್ನೆಲೆ ಆಯಾ ಗ್ರಾಮ ಪಂಚಾಯಿತಿಗಳು ಠರಾವು ಪಾಸು ಮಾಡುವ ಮೂಲಕ ತಮ್ಮ ವ್ಯಾಪ್ತಿಯ ನೆಲದ ನಾಯಕರನ್ನು ನವಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಹಿರಿಯರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಂಚಾಲಕ ಆವರಗೆರೆ ರುದ್ರಮುನಿ ತಿಳಿಸಿದರು.ತಾಲೂಕಿನ ಕಾಕೋಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಏಕೀಕರಣ ರೂವಾರಿ ಕರ್ಮಯೋಗಿ ಕೆ.ಎಫ್. ಪಾಟೀಲರ 120ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹುತಾತ್ಮ ಮೈಲಾರ ಮಹಾದೇವಪ್ಪ ಹಾಗೂ ಸ್ವಾತಂತ್ರ್ಯ ಸೇನಾನಿ ಸಂಗೂರ ಕರಿಯಪ್ಪ ಅವರ ವಿದ್ಯಾಗುರುಗಳಾದ ಕೆ.ಎಫ್. ಪಾಟೀಲರು ತಮ್ಮ ಶಿಷ್ಯ ಸಮೂಹವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿದ್ದರು. ರಾಜಕಾರಣದಲ್ಲಿದ್ದರೂ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಜತೆಗೆ ಶೈಕ್ಷಣಿಕ ಕಾಳಜಿ ಕಾರಣಕ್ಕೆ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ತಮ್ಮ ಕಾಳಜಿ ಮೆರೆದಿದ್ದರು. ಇಂಥ ಮಹನೀಯರನ್ನು ಸ್ಮರಿಸುವ ಕಾರಣಕ್ಕೆ ಕಳೆದ ಹತ್ತು ವರ್ಷಗಳಿಂದ ಗ್ರಾಮ ಸ್ವರಾಜ್ ಅಭಿಯಾನ ಮೂಲಕ ನಿರಂತರ ವಿಧಾಯಕ ಕಾರ್ಯ ಮಾಡುತ್ತಿದ್ದೇವೆ. ಸ್ಥಳೀಯರೂ ತಮ್ಮೂರಿನ ಹೋರಾಟಗಾರರನ್ನು ಸ್ಮರಿಸುವ ಕಾರ್ಯ ಮಾಡಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಗುಡದೇಶ ಸೂರಣಗಿ ಮಾತನಾಡಿ, ಬಡತನದಲ್ಲಿ ಬೆಳೆದು ರಿಂಗ್ ಲೀಡರ್ ಆಗಿ ಗುರುತಿಸಿಕೊಂಡ ಕೆ.ಎಫ್. ಪಾಟೀಲರಿಗೆ ಶೈಕ್ಷಣಿಕ ಸಂಗತಿಗಳ ಅರಿವಿತ್ತು. ಇದೇ ಕಾರಣಕ್ಕೆ ನಮ್ಮೂರಿನ ಪ್ರಾಥಮಿಕ ಶಾಲೆಗೆ ವಜ್ರದುಂಡಿ ಕಲ್ಲುಗಳಿಂದ ಕಟ್ಟಡ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಎರಡು ಬಾವಿಗಳನ್ನು ನಿರ್ಮಿಸಲು ಶ್ರಮಿಸಿದ್ದರು. ತಾವು ಕೂಡಿಟ್ಟ ಹಣದಲ್ಲಿ ಹಾವೇರಿ ಹಾಗೂ ರಾಣಿಬೆನ್ನೂರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಈ ಮೂಲಕ ನವಭಾರತ ನಿರ್ಮಾಣಕ್ಕೆ ಶಿಕ್ಷಣದ ಮಹತ್ವವನ್ನು ತೋರಿಸಿಕೊಟ್ಟ ಅವರು ನಮ್ಮೂರಿನ ಪ್ರಾತಃಸ್ಮರಣೀಯರು ಎಂದರು.ಗ್ರಾಮದ ಮಾಲತೇಶ ಶಿಡಗನಾಳ ಮಾತನಾಡಿ, ಉಪವಾಸ ದಿನಗಳನ್ನು ಕಳೆದಿದ್ದರೂ ಸ್ವಗ್ರಾಮದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಕೆ.ಎಫ್. ಪಾಟೀಲರನ್ನು ಸದಾ ಸ್ಮರಿಸುವುದು ಅತಿ ಅವಶ್ಯವಿದೆ. ಗ್ರಾಮದಲ್ಲಿ ಅವರ ಹೆಸರಿನಡಿ ಯೋಜನೆ ರೂಪಿಸಬೇಕಿದೆ. ಇದು ನಾವು ಅವರ ಋಣ ತೀರಿಸಲು ಸಕಾಲ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಕೂರಗುಂದ, ಸದಸ್ಯರಾದ ಶಿವಾನಂದ ಕಡೇಮನಿ, ಸಿದ್ಧಾರೂಢ ಕೂನಬೇವು, ರುದ್ರಪ್ಪ ಕಿವುಡನವರ, ಬರಲಿಂಗಪ್ಪ ಅಸುಂಡಿ, ಮಹದೇವಪ್ಪ ಹಿರೇಬಿದರಿ, ದೀಪಾ ಹಿತ್ತಲಮನಿ, ಲಕ್ಷ್ಮವ್ವ ಕೊಂಬಳಿ, ಮುಖ್ಯ ಶಿಕ್ಷಕ ಬಿ.ಜೆ. ಯಲಿಗಾರ, ಎಂ.ವಿ. ಗಜೇಂದ್ರಗಡ, ಮಹೇಶ ಬಿ.ಜಿ., ಚನ್ನಬಸಮ್ಮ ಜೆ., ಸುಧಾ ಡಿ.ಎಸ್., ವಿಜಯಲಕ್ಷ್ಮಿ ದೇಶಿ, ಸವಿತಾ ಗುರುನಾಯಕ, ಗ್ರಾಮ ಸ್ವರಾಜ್ ಅಭಿಯಾನದ ಜಿಲ್ಲಾ ಸಂಚಾಲಕ ಸುಭಾಷ್ ಮಡಿವಾಳರ, ಡಿ.ಎಫ್. ಮಾದರ, ಶಿವಾನಂದ ದೇವರಹಳ್ಳಿ, ಪ್ರಭು ಬಿ.ಎಂ. ಉಪಸ್ಥಿತರಿದ್ದರು.