ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು ಆರೋಗ್ಯಯುತವಾಗಿದೆ: ಶಾಸಕ ಅಶೋಕ್ ರೈ
ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರ ವಿಶ್ವದಲ್ಲೇ ಮೊದಲು ದ.ಕ.ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಶಿಕ್ಷಣ ಮತ್ತು ಬ್ಯಾಂಕ್ ಕ್ಷೇತ್ರದಲ್ಲಿ ಈಗಲೂ ದ.ಕ. ಜಿಲ್ಲೆಯು ಮುಂಚೂಣಿಯಲ್ಲಿರುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಸಹಕಾರಿ ಬ್ಯಾಂಕ್‌ಗಳಿವೆ. ಆದರೆ ನಮ್ಮ ಜಿಲ್ಲೆಯ ಬ್ಯಾಂಕ್‌ಗಳು ಆರೋಗ್ಯಯುತವಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ ಸಹಕಾರಿ ಕ್ಷೇತ್ರಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ಎ.ವಿ.ಜಿ ಅಸೋಸಿಯೇಟ್ಸ್, ಎ.ವಿ.ಜಿ. ಕನ್‌ಸ್ಟ್ರಕ್ಷನ್ಸ್, ಎ.ವಿ.ಜಿ. ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಆಡಳಿತ ಮಂಡಳಿಯಿಂದ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಆರಂಭಿಸಲಾದ ದ.ಕ. ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಲೋಕಾರ್ಪಣಾ ಸಮಾರಂಭದಲ್ಲಿ ಸೊಸೈಟಿಯ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ, ಪ್ರಥಮ ಸಾಲ ಪತ್ರ ವಿತರಣೆ ಮಾಡಿ ಮಾತನಾಡಿದ ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ,ನೂತನ ಸೊಸೈಟಿ ನಿರಂತರ ಲಾಭದಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.ಸೊಸೈಟಿಯ ಕಚೇರಿ ಕಟ್ಟಡದಲ್ಲಿ ಪೂರ್ವಾಹ್ನ ಗಣಹೋಮದ ಮೂಲಕ ದೇವತಾ ಪ್ರಾರ್ಥನೆ ನಡೆಯಿತು. ಬಳಿಕ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಕಚೇರಿ ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೋಶ ಉದ್ಘಾಟಿಸಿದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಗಣಕಯಂತ್ರ ವ್ಯವಸ್ಥೆಗೆ ಚಾಲನೆ ನೀಡಿದರು. ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷರ ಕೊಠಡಿ ಉದ್ಘಾಟಿಸಿದರು. ಎವಿಜಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.ಪ್ರಥಮ ಸಾಲ ಪತ್ರ ವಿತರಣೆ, ಪ್ರಥಮ ಠೇವಣಿ ಪತ್ರ ವಿತರಣೆ ಹಾಗೂ ಸೊಸೈಟಿಯ ಮಾಹಿತಿ ಪತ್ರ ಅನಾವರಣಗೊಳಿಸಲಾಯಿತು.ಸೊಸೈಟಿಯ ಉಪಾಧ್ಯಕ್ಷ ಉಮೇಶ ಮಳುವೇಲು, ನಿರ್ದೇಶಕರಾದ ಸೀತಾರಾಮ ಕೇವಳ, ಗುಡ್ಡಪ್ಪ ಗೌಡ ಬಲ್ಯ, ಟಿ. ಗಂಗಯ್ಯ ಗೌಡ, ಜಯಪ್ರಕಾಶ್ ಕಳುವಾಜೆ, ಎಚ್. ಸುಂದರ ಗೌಡ, ಗಂಗಾಧರ ಎ.ವಿ., ಪದ್ಮಪ್ಪ ಗೌಡ ಕೆ., ಕೆ. ಮಾಧವ ಗೌಡ, ಮೋಹನ್ ಜಿ., ವೇದಾವತಿ ಶೀನಪ್ಪ ಗೌಡ ಬೈತಡ್ಕ, ಉಷಾಲಕ್ಷೀ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ ಇದ್ದರು.
ಮುಖ್ಯ ಪ್ರವರ್ತಕ ಎ.ವಿ. ನಾರಾಯಣ ಸ್ವಾಗತಿಸಿದರು. ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ನಿರ್ದೇಶಕಿ ಪ್ರತಿಭಾದೇವಿ ಹಾಗೂ ವಸಂತ ವೀರಮಂಗಲ ನಿರ್ವಹಿಸಿದರು.