ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಬರುವ ಬೇಸಿಗೆಯಲ್ಲಿ ಮತಕ್ಷೇತ್ರದ ಯಾವುದೇ ಹಳ್ಳಿಗೂ ಕುಡಿಯುವ ನೀರಿನ ಸಮಸ್ಯೆ ಆಗುವಂತಿಲ್ಲ. ಈಗಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಹೇಳಿದರು.ಮಂಗಳವಾರ ಪಟ್ಟಣದ ಗುರುಸಿದ್ದೇಶ್ವರ ಸಭಾ ಭವನದಲ್ಲಿ ಜರುಗಿದ ಗುಳೇದಗುಡ್ಡ-ಬಾದಾಮಿ ತಾಲೂಕುಗಳ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗುವಂತಿಲ್ಲ. ಅನುದಾನ ಇಲ್ಲವೆಂದು ನೆಪ ಹೇಳಬೇಡಿ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದರು.
ಗುಳೇದಗುಡ್ಡ ಬಸ್ ಡಿಪೋ ಮ್ಯಾನೇಜರ್ ವಿದ್ಯಾ ನಾಯಕ ಅವರಿಗೆ ಕ್ಲಾಸ್ ತೆಗೆದುಕೊಂಡ ಶಾಸಕರು, ಗುಳೇದಗುಡ್ಡ ಮಾರ್ಗದಿಂದ ಬಾಗಲಕೋಟೆ, ಕೆರೂರ, ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಕಚೇರಿಯಲ್ಲಿ ಕುಳಿತು ಏನು ಮಡುತ್ತೀರಿ. ರೂಟ್ ಮೇಲೆ ಹೋಗಿ ನೋಡಿ ಪ್ರಯಾಣಿಕರ ಸಮಸ್ಯೆ ಗೊತ್ತಾಗಲಿದೆ. ಕೆಲವು ಪ್ರಮುಖ ಸ್ಥಳಗಳಿಗೆ ಬಸ್ ಸೌಲಭ್ಯವಿಲ್ಲ. ಗುಳೇದಗುಡ್ಡ-ಹೈದರಾಬಾದ್ ಬಸ್ ಬಂದ್ ಮಾಡಿದ್ದಿರಿ, ಬಾದಾಮಿ ಡಿಪೋದವರು ಬಾದಾಮಿ ಪುಣೆ ಬಸ್ ಬಂದ್ ಮಾಡಿದ್ದೀರಿ, ಗುಳೇದಗುಡ್ಡದಿಂದ ಕೆರೂರ್ ಪಟ್ಟಣಕ್ಕೆ ಬಸ್ ಇಲ್ಲ. ಒಂದೂವರೆ ವರ್ಷದ ಹಿಂದೆ ನಾನು ಕೆಲ ಮಹತ್ವದ ವಿಷಯ ಹೇಳಿದ್ದೆ. ಹೇಳಿದ ಒಂದು ಕೆಲಸವನ್ನು ಮಾಡಿಲ್ಲ. ಐಎಎಸ್ ಅಧಿಕಾರಿ ಥರ ವರ್ತನೆ ಬಿಡಿ, ಪ್ರಯಾಣಿಕರೊಂದಿಗೆ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಮುಂದಿನ ಕೆಡಿಪಿ ಸಭೆಯೊಳಗೆ ಹೇಳಿದ ಕೆಲಸ ಮಾಡದಿದ್ದರೆ ಮುಂದಿನ ಸಭೆ ನಂತರ ಬೇರೆ ಕಡೆ ಕಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸಾರಿಗೆ ಇಲಾಖೆಯ ಆಸ್ತಿ ಎಲ್ಲಿ ಎಷ್ಟಿದೆ ಎಂದು ಕೆಳಿದರೆ ಡಿಪೋ ಮ್ಯಾನೇಜರ್ ಸರಿಯಾದ ಉತ್ತರ ನೀಡದ್ದಕ್ಕೆ ಶಾಸಕರು ಗರಂ ಆದರು.ವಸತಿ ನಿಲಯಗಳಿಗೆ, ಅಂಗನವಾಡಿಗಳಿಗೆ ಕಟ್ಟಡಗಳ ಅಗತ್ಯತೆ ಇದೆ. ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳ ಪಡೆಯಿರಿ. ಕಟ್ಟಡಗಳು ತಡವಾದರೂ ತಮ್ಮ ಇಲಾಖೆಯ ಹೆಸರಿನ ಮೇಲೆ ಜಾಗೆಗಳಾದರೂ ಇರಲಿ. ಆ ಕೆಲಸ 15 ದಿನಗಳ ಒಳಗೆ ಇಲಾಖಾ ಅಧಿಕಾರಿಗಳು ಮಾಡಿ ಎಂದು ಸೂಚನೆ ನೀಡಿದರು. ಕೆಲ ಇಲಾಖಾ ಅಧಿಕಾರಿಗಳು ಸರಿಯಾದ ಮಾಹಿತಿ ತರದೇ ಬಂದಿದ್ದಕ್ಕೆ, ಮಾಹಿತಿ ತರದೇ ಬರುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಶಾಲಾ ಹೆಣ್ಣು ಮಕ್ಕಳಿಗೆ ವಿತರಿಸುವ ಕಿಟ್ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ದೂರುಗಳಿವೆ. ಬಿಇಒ, ಟಿಎಚ್ಇ ಇದನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿ. ಗ್ರಾಮೀಣ ರಸ್ತೆ ಕಾಮಗಾರಿ ಅರಣ್ಯ ಇಲಾಖೆಯಿಂದ ಕೆಲವು ಕಡೆ ನಿಂತು ಹೋಗಿವೆ. ಕಾನೂನು ಬದ್ಧವಾಗಿ ಸರಿಪಡಿಸಿ, ಅಲ್ಲಿನ ಹಿರಿಯರ ಮಾರ್ಗದರ್ಶನ ಪಡೆಯಿರಿ ಎಂದು ನಿರ್ದೇಶನ ನೀಡಿದರು. ಇದೇ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ 3.30 ಕ್ಕೆ ಆರಂಭವಾದ ಸಭೆ ಸಂಜೆ 7.30 ಕ್ಕೆ ಮುಗಿಸಿದರು.
ಬಾದಾಮಿ ತಹಸೀಲ್ದಾರ ಮಧುರಾಜ, ಗುಳೇದಗುಡ್ಡ ತಹಸೀಲ್ದಾರ ಮಂಗಳಾ ಎಂ., ಗುಳೇದಗುಡ್ಡ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಬಾದಾಮಿ ತಾಪಂ ಇಒ ಸುರೇಶ ಕೊಕರೆ, ತಾಲೂಕು ಉಸ್ತುವಾರಿ ಅಧಿಕಾರಿ ಶಿವಾನಂದ ಸಾಗರ ವೇದಿಕೆ ಮೇಲಿದ್ದರು.ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕುಗಳ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಬಿಇಒ, ಗ್ರಾಮೀಣ ಕುಡಿಯುವ ನೀರು ಇಲಾಖೆ, ಪ್ರಧಾನಮಂತ್ರಿ ಸಡಕ್ ಯೋಜನಾ ಅಧಿಕಾರಿಗಳು, ಪಿಡಬ್ಲ್ಯುಡಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ಟಿಎಚ್ಒ, ಅರಣ್ಯ ಇಲಾಖೆ ಅಧಿಕಾರಿ ಸೇರಿದಂತೆ ಮತಕ್ಷೇತ್ರದ ಎರಡೂ ತಾಲೂಕುಗಳ ವಿವಿಧ ಇಲಾಖಾ ಅಧಿಕಾರಿಗಳಿದ್ದರು.