ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ, ಗ್ರಾಮದಿಂದ ಹೊರ ಹಾಕಿ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork | Published : Nov 19, 2024 12:46 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೆಲವರು ರಾಜಕಾರಣದಲ್ಲಿ ಸುಳ್ಳುಗಳನ್ನೇ ಸತ್ಯವಾಗಿಸಲು ಹೊರಟ್ಟಿದ್ದಾರೆ. ಸಾರ್ವಜನಿಕರು ಸತ್ಯ ಮತ್ತು ಸುಳ್ಳುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ರಾಮೀಣ ಪ್ರದೇಶಕ್ಕೆ ಲಗ್ಗೆ ಹಾಕಿರುವ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಸಂಘಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಕಂದೇಗಾಲ ಶ್ರೀಮತ್ತಿತಾಳೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಸ್ಥೆಗಳು ರೈತರು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡು ಖಾಸಗಿ ಫೈನಾನ್ಸ್ ಬಡ್ಡಿಕೋರರನ್ನು ಗ್ರಾಮದಿಂದ ಹೊರ ಹಾಕಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೆಲವರು ರಾಜಕಾರಣದಲ್ಲಿ ಸುಳ್ಳುಗಳನ್ನೇ ಸತ್ಯವಾಗಿಸಲು ಹೊರಟ್ಟಿದ್ದಾರೆ. ಸಾರ್ವಜನಿಕರು ಸತ್ಯ ಮತ್ತು ಸುಳ್ಳುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಬೇಕೆಂದು ಹೇಳಿದರು.

ಕೃಷಿ ಆಧಾರಿತ ಪ್ರತಿಯೊಬ್ಬ ರೈತನು ಸಹಕಾರ ಸಂಘಗಳಲ್ಲಿ ವಹಿವಾಟಿನಲ್ಲಿ ಒಳಗಾಗಿರುತ್ತಾರೆ. ನಬಾರ್ಡ್ ಡಿಸಿಸಿ ಬ್ಯಾಂಕ್‌ಗೆ ಹಣ ನೀಡುತ್ತದೆ. ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತಿದೆ ಎಂದರು.

ದೇಶದಲ್ಲೆಡೆ ಅಗತ್ಯ ವಸ್ತುಗಳಿಗೆ ಬೆಲೆ ನಿಗಧಿ ಮಾಡಲಾಗುತ್ತಿದೆ. ಆದರೆ, ರೈತರು ಬೆಳೆದ ಬೆಳೆಗಳು, ಆಹಾರದ ಪದಾರ್ಥಗಳಿಗೆ ಇಂದಿಗೂ ರೈತರು ಬೆಲೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಇಂತಹ ವ್ಯವಸ್ಥೆಗಳಲ್ಲಿ ರೈತರ ಪರ ನಿಂತಿರುವುದು ಮಾತ್ರ ಸಹಕಾರಿ ಕ್ಷೇತ್ರವಾಗಿದೆ ಎಂದರು.

ಅಂಚೇದೊಡ್ಡಿಯಿಂದ ದೇವಸ್ಥಾನದವರೆಗೆ 6 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಐತಿಹಾಸಿಕ ಮತ್ತಿತಾಳೇಶ್ವರ ದೇವಸ್ಥಾನವನ್ನು ವಿಶೇಷ ನೂತನವಾಗಿ ನಿರ್ಮಿಸಲು ಶ್ರಮಿಸಲಾಗುವುದು. ಜೊತೆಗೆ ತಾಲೂಕಿನ ಸರ್ವಂಗೀಣ ಅಭಿವೃದ್ದಿಗಾಗಿ ಬೇಸಿಗೆ ವೇಳೆಗೆ ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ನಿಂದ ಒಂದು ಸಾವಿರ ಕೋಟಿ ರು ಬೆಳೆಸಾಲ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 200 ಕೋಟಿ ರು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆಎಂದರು.

ಕಾರ್ಯಕ್ರಮದಲ್ಲಿ ಕಂದೇಗಾಲ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು, ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಪ್ರಮುಖರಾದ ಕೃಷ್ಣೇಗೌಡ, ಎನ್.ದಾಸೇಗೌಡ, ಪುಟ್ಟಸ್ವಾಮಿಗೌಡ, ಕೆ.ಜೆ.ದೇವರಾಜು, ಕುಳ್ಳಚನ್ನಂಕಯ್ಯ, ಕೆ.ಎಸ್. ದ್ಯಾಪೇಗೌಡ, ಎಂ.ಲಿಂಗರಾಜು, ನಾಗಭೂಷಣ್, ಅನಿತಾ, ಮರಿಸ್ವಾಮಿ, ಕೆ.ಬಿ ಸೋಮಣ್ಣ, ದೊಡ್ಡಯ್ಯ ಸಿ.ಪಿ ರಾಜು ಸೇರಿದಂತೆ ಇತರರು ಇದ್ದರು.

Share this article