ಚನ್ನಪಟ್ಟಣ: ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಬಹಳಷ್ಟು ಕಾಯಿಲೆಗಳು ಬರುತ್ತವೆ. ಯುವಜನತೆ ತಂಬಾಕು ಸೇವನೆಯಿಂದ ದೂರವಿರುವ ಜತೆಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.
ತಾಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ತಂಬಾಕು ಉತ್ಪನ್ನಗಳ ದಾಸರಾಗಿ ತಮಗೆ ಅರಿವಿಲ್ಲದಂತೆ ತಮ್ಮ ಬದುಕುನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ೭ ಸಾವಿರ ಅಪಾಯಕಾರಿ ವಸ್ತುಗಳನ್ನು ಹೊಂದಿದೆ. ತಂಬಾಕು ಸೇವನೆಯಿಂದ ದೂರವಿದ್ದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆ, ಅಸ್ತಮಾ, ಮಧುಮೇಹ, ಹೃದಯ, ಮೂಳೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಂದ ಪಾರಾಗಿ ಶೇ.೨೨ರಷ್ಟು ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ತಂಬಾಕು ಸೇವನೆಯಿಂದ ಹಲವಾರು ರೋಗಗಳು ಬರುತ್ತಿದ್ದು, ಇದರಿಂದ ದೇಶದಲ್ಲಿ ಪ್ರತಿನಿತ್ಯ ೨೫೦೦ ಜನರು ಸಾವನ್ನಪ್ಪುತ್ತಿದ್ದಾರೆ. ಪ್ರಪಂಚದಲ್ಲಿ ಪ್ರತಿನಿತ್ಯ ೭೦ ಲಕ್ಷ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ ಎಂದು ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಂಗಲ್ ವಲಯದ ಯೋಜನಾಧಿಕಾರಿ ನಾಗಭೂಷಣ ಪೈ ಮಾತನಾಡಿ, ತಂಬಾಕು ದೇಹದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿಶ್ವಾದ್ಯಂತ ಪ್ರತಿ ವರ್ಷ ೫.೪ ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ. ೩೦ರಷ್ಟು ಜನ ಮಾದಕ ವಸ್ತುಗಳ ವ್ಯಸನಿಗಳಾಗಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಉತ್ತಮ ಮಾಹಿತಿಯನ್ನು ತಿಳಿದುಕೊಂಡು ಜಾಗೃತರಾಗಿ ಸ್ವಾಸ್ಥ್ಯ ಜೀವನ ನಡೆಸುವುದರ ಇತರರಿಗೂ ಈ ವಸ್ತುಗಳಿಂದ ದೂರವಿರುವಂತೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.ಹೊಂಗನೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಚಿಕ್ಕರಾಜು ಮಾತನಾಡಿದರು. ವಿದ್ಯಾರ್ಥಿಗಳಿಗೆ ತಂಬಾಕು ಮುಕ್ತ ರಾಷ್ಟ್ರವನ್ನಾಗಿಸುವ ಜವಾಬ್ದಾರಿ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಂಗನೂರು ವಲಯದ ಮೇಲ್ವಿಚಾರಕ ಕುಮಾರಿ, ಸೇವಾ ಪ್ರತಿನಿಧಿಗಳಾದ ಗೀತಾ, ಸುಚಿತ್ರ, ಪಲ್ಲವಿ, ಹೊಂಗನೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎಂ.ಟಿ.ಕೃಷ್ಣಕುಮಾರ್ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕಾಂತ್ ಇತರರಿದ್ದರು.ಪೊಟೋ೨ಸಿಪಿಟ೧: ಚನ್ನಪಟ್ಟಣ ತಾಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಯಿತು.