ಕನ್ನಡಪ್ರಭ ವಾರ್ತೆ ಬೇಲೂರು
ಮಧ್ಯವರ್ತಿಗಳ ಹಾವಳಿಗಳನ್ನು ತಪ್ಪಿಸಿ ಕಾರ್ಮಿಕ ಇಲಾಖೆಯಲ್ಲಿ ನೀಡುವ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದರು.ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇಲಾಖೆಗೆ ಬಂದ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವುದಿಲ್ಲ. ಮಧ್ಯವರ್ತಿಗಳ ಕೆಲಸ ಕಾರ್ಯಗಳಿಗೆ ಮುನ್ನಣೆ ನೀಡುತ್ತಿದ್ದು, ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ವಿದ್ಯಾರ್ಥಿ ವೇತನವನ್ನು ಕಳೆದ ೨ ವರ್ಷಗಳಿಂದ ನೀಡದೆ ಸತಾಯಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡರ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿದರು.ನಂತರ ಮಾತನಾಡಿದ ಕರವೇ ಅದ್ಯಕ್ಷ ವಿ ಎಸ್ ಭೋಜೇಗೌಡ, ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆ ಮಾಡುತ್ತಿದೆ. ಆದರೆ ಇಲ್ಲಿಯ ಗಣಕೀಕೃತ ಕೆಲಸ ಮಾಡುವ ವ್ಯಕ್ತಿಯೊಬ್ಬರು ಸಾರ್ವಜನಿಕರ ಜೊತೆ ಉಡಾಫೆ ಮಾತಾಡುವುದಲ್ಲದೆ ಹಣ ಕೊಟ್ಟರೆ ಹಾಗೂ ಮಧ್ಯವರ್ತಿಗಳ ಜೊತೆ ಬಂದರೆ ಶೀಘ್ರವೇ ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಅಲ್ಲದೆ ಯಾವುದೇ ಕಾರ್ಮಿಕರ ಸಂಕಷ್ಟ ಕೇಳದಂತ ಸ್ಥಿತಿ ಈ ತಾಲೂಕಿನಲ್ಲಿದೆ. ಬಾಲಕಾರ್ಮಿಕರು ಹಾಗು ವಿವಿಧ ಉದ್ದಮೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ. ಕೂಡಲೆ ಸಮಸ್ಯೆಗಳ ಅರಿತು ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಹಾಕಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.ಹೊರರಾಜ್ಯದ ಕಾರ್ಮಿಕರ ಹಾವಳಿ:ತಾಲೂಕಿನಲ್ಲಿ ಹೊರರಾಜ್ಯದ ಅಸ್ಸಾಂ ಕಾರ್ಮಿಕರ ಹಾವಳಿ ಮಿತಿಮೀರಿದ್ದು ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಹಾಗು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ತಾಲೂಕಿನಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಅಸ್ಸಾಂ ಕಾರ್ಮಿಕರು ನೆಲೆಯೂರಿರುವ ಬಗ್ಗೆ ಮಾಹಿತಿ ಇದ್ದರೂ ಇಲ್ಲಿ ಕೇವಲ ೨೦೦ ಜನ ಮಾತ್ರ ನೋಂದಣಿಯಾಗಿದ್ದಾರೆಂದು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಮುಂದೆ ಇದರಿಂದ ತೊಂದರೆಯಾದರೆ ನೇರ ಹೊಣೆ ಈ ಇಲಾಖೆಯೇ ಆಗಿರುತ್ತದೆ. ಕೂಡಲೇ ಇದರ ಬಗ್ಗೆ ಪೊಲೀಸ್ ಇಲಾಖೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮುಂದಾಗುವ ಅನಾಹುತ ತಪ್ಪಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರೆವೇ ಪ್ರವೀಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷ ಮಂಜು ಆಚಾರ್, ಹುಸೇನ್, ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.