ಮೇಕೆದಾಟುಗೆ ಪಿಎಂ ಸಹಿಗಾಗಿ ಕಾಯುತ್ತಿದ್ದೇನೆ: ಡಿಕೆಶಿ

KannadaprabhaNewsNetwork |  
Published : Jan 27, 2025, 12:48 AM IST

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಒಂದೇ ದಿನದಲ್ಲಿ ಪ್ರಧಾನಿ ಮೋದಿ ಅವರ ಕೈಯಿಂದ ಮೇಕೆದಾಟು ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಒಂದೇ ದಿನದಲ್ಲಿ ಪ್ರಧಾನಿ ಮೋದಿ ಅವರ ಕೈಯಿಂದ ಮೇಕೆದಾಟು ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಗಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5,300 ಕೋಟಿಯನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗೆ ಹಣ ನೀಡುತ್ತದೆ ಎಂದು ನಂಬುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ದೇವೇಗೌಡರು, ಕುಮಾರಸ್ವಾಮಿ ಒಂದೇ ದಿನದಲ್ಲಿ ಮೋದಿ ಅವರ ಕೈಯಿಂದ ಮೇಕೆದಾಟಿಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುತ್ತೇವೆ ಎಂದಿದ್ದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು.

ನಾವು ಈ ವಿಚಾರವಾಗಿ ಮನವಿ ಮಾಡಿದ್ದೇವೆ. ರಾಜ್ಯದಿಂದ ಇಷ್ಟೊಂದು ಸಂಸದರು ಇದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೆ ಮೋಸ ಮಾಡುವುದಿಲ್ಲ, ಅನುದಾನ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಕೇಳಿದ್ದೇವೆ. ಮುಖ್ಯಮಂತ್ರಿಗಳು ಸಹ ಪತ್ರ ಬರೆದಿದ್ದಾರೆ. ಸಂಸತ್ ಕಲಾಪದ ವೇಳೆಯೂ ಹೋಗಿ ಭೇಟಿ ಮಾಡುತ್ತೇನೆ. ನಮ್ಮ ಕರ್ತವ್ಯ ಮಾಡುತ್ತೇನೆ. ಫಲಾಫಲ ಭಗವಂತನಿಗೆ ಬಿಟ್ಟದ್ದು ಹೇಳಿದರು.

ಬೆಂಗಳೂರಿನ ಯೋಜನೆಗಳಿಗೆ ಅನುದಾನ ಕೋರಿ ಪತ್ರ ಬರೆದಿರುವುದನ್ನು ಕೇಂದ್ರ ಸರ್ಕಾರ ಪರಿಗಣಿಸುವುದೇ ಎಂಬ ಪ್ರಶ್ನೆಗೆ, ಬೆಂಗಳೂರು ಜಾಗತಿಕ ನಗರ. ಹೀಗಾಗಿ ಕೇಂದ್ರ ಸರ್ಕಾರ ಕೇವಲ ಬಿಹಾರ ಹಾಗೂ ಆಂಧ್ರಪ್ರದೇಶವನ್ನು ಮಾತ್ರ ನೋಡಬಾರದು. ಕರ್ನಾಟಕದ ಪ್ರತಿನಿಧಿಯಾಗಿ ನಮ್ಮ ರಾಜ್ಯದ ಕಡೆಯೂ ನೋಡಿ, ಬೆಂಗಳೂರಿಗೆ ಅಗತ್ಯ ಅನುದಾನ ನೀಡಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಹಾಗೂ ಪ್ರಧಾನಮಂತ್ರಿಗಳಿಗೂ ಮನವಿ ಮಾಡಿದ್ದೇನೆ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದಿದ್ದು ಕೇಂದ್ರಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಗಡುವು ನೀಡುತ್ತೀರಾ ಎಂದು ಕೇಳಿದಾಗ, ನಾವು ಗಡುವು ನೀಡುವುದಿಲ್ಲ. ಮಹಾತ್ಮಾ ಗಾಂಧೀಜಿ ಅವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ಗೆಲ್ಲಬೇಕಾದರೆ ನಿಮ್ಮ ಮೆದುಳು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯವನ್ನು ಪ್ರಯೋಗಿಸು ಎಂದು ಹೇಳಿದ್ದಾರೆ. ನಮ್ಮದೂ ಅದೇ ಮಾರ್ಗ ಎಂದಷ್ಟೇ ಹೇಳಿದರು.-ಬಾಕ್ಸ್‌-

ಎರಡು ನಿಮಿಷ ಕಾಫಿ ಕುಡಿಯಬಾರದೇ?: ಡಿಕೆಶಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಪ್ರತ್ಯೇಕ ಮಾತುಕತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಈ ಕಚೇರಿ ಕಟ್ಟಿದ್ದು ಅವರೇ. ಅವರು ಇಲ್ಲಿ 2 ನಿಮಿಷ ನೆಮ್ಮದಿಯಾಗಿ ಕಾಫಿಯನ್ನೂ ಕುಡಿಯಬಾರದೇ? ನೀವು ನಿಮ್ಮ ಮನೆಯವರು ಚರ್ಚೆ ಮಾಡಿದನ್ನು ಸಾರ್ವಜನಿಕವಾಗಿ ಮಾತನಾಡುತ್ತೀರಾ ಎಂದು ಸುದ್ದಿಗಾರರಿಗೆ ಪ್ರಶ್ನಿಸಿದರು.

ಕುಟುಂಬ ಬೇರೆ ರಾಜಕೀಯ ಬೇರೆ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮುಖ್ಯಮಂತ್ರಿಗಳು ವಾಣಿ ವಿಲಾಸ ಸಾಗರ ಆಣೆಕಟ್ಟಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದ್ದಾರೆ’ ಎಂದಷ್ಟೇ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ