ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲಾ ತಂಡವು ಕೇವಲ 04 ಅಂಕಗಳಿಂದ ಗದಗ ತಂಡವನ್ನು ಮಣಿಸುವ ಮೂಲಕ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಕಿಕ್ಕಿರಿದು ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ನೆರೆದಿದ್ದ ಇಲ್ಲಿನ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಚಪ್ಪಾಳೆ ಕೇಕೆಗಳ ಸಹಕಾರ ಪಡೆದ ಬಾಗಲಕೋಟೆಯ ಬಾಲಕಿಯರು ಗದಗ ತಂಡವನ್ನು ಅಂತಿಮವಾಗಿ (24-20) ರಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 04 ಅಂಕಗಳ (10-06) ಮುನ್ನಡೆ ಸಾಧಿಸಿದ್ದ ಬಾಗಲಕೋಟೆ ಬಾಲಕಿಯರು ಅದೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಬಾಗಲಕೋಟೆ ತಂಡವು ಚಿಕ್ಕೋಡಿ ವಿರುದ್ಧ 06 ಅಂಕಗಳಿಂದ (31-25) ಜಯಗಳಿಸಿದರೇ, ಗದಗ ತಂಡ ಹಾವೇರಿ ವಿರುದ್ಧ ಟೈಬ್ರೇಕರ್‌ನಲ್ಲಿ 02 ಅಂಕಗಳಿಂದ ಮಣಿಸುವ ಮೂಲಕ ಅಂತಿಮ ಸುತ್ತನ್ನು ತಲುಪಿದ್ದವು.14 ವರ್ಷದ ಬಾಲಕರ ವಿಭಾಗದಲ್ಲಿ ಕಾರವಾರಕ್ಕೆ ಪ್ರಶಸ್ತಿ:
ತೀವ್ರ ಹೋರಾಟ ತೋರಿದ ಕಾರವಾರ ಜಿಲ್ಲೆಯ ಬಾಲಕರು 09 ಅಂಕಗಳಿಂದ (37-28) ಬೆಳಗಾವಿಯನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು, ಪಂದ್ಯದ ಮೊದಲಾರ್ಧದಲ್ಲಿ ಕೇವಲ 04 ಅಂಕಗಳ(15-11) ಮುನ್ನಡೆ ಸಾಧಿಸಿದ್ದ ಕಾರವಾರ ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತಿ ಟ್ಯಾಕಲ್‌ನಲ್ಲಿ ಸಾಂಘಿಕ ಹೋರಾಟದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಕಾರವಾರ ತಂಡವು ಶಿರಸಿ ವಿರುದ್ಧ 14 ಅಂಕಗಳಿಂದ (49-35) ಜಯ ಗಳಿಸಿದರೇ, ಬೆಳಗಾವಿ ತಂಡವು ಚಿಕ್ಕೋಡಿ ವಿರುದ್ದ 03 ಅಂಕಗಳಿಂದ (43-40) ಮಣಿಸುವ ಮೂಲಕ ಅಂತಿಮ ಸುತ್ತನ್ನು ಪ್ರವೇಶಿಸಿದ್ದವು.
17 ವರ್ಷದ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿಗೆ ಪ್ರಶಸ್ತಿ:ಛಲ ಬಿಡದೇ ಮುನ್ನುಗ್ಗಿದ ಚಿಕ್ಕೋಡಿಯ ಬಾಲಕಿಯರು ಧಾರವಾಡದ ವಿರುದ್ಧ 04 ಅಂಕಗಳಿಂದ (22-18) ಜಯಿಸುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಅಂತಿಮ ಪಂದ್ಯದ ಮೊದಲಾರ್ಧದಲ್ಲಿ 03 ಅಂಕಗಳ (07-10) ಹಿನ್ನಡೆ ಕಂಡಿತ್ತಾದ್ದರೂ ಸಹ ಸೆಕೆಂಡ್ ಹಾಫ್ ನಲ್ಲಿ ತೀವ್ರ ಹೋರಾಟ ನಡೆಸಿದ ಚಿಕ್ಕೋಡಿಯ ಬಾಲಕಿಯರು ಅಂತಿಮವಾಗಿ ಪ್ರಶಸ್ತಿಗೆ ಭಾಜನರಾದರು.ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಚಿಕ್ಕೋಡಿ ಬಾಲಕಿಯರು ಅತಿಥೇಯ ಹಾವೇರಿಯನ್ನು 21 ಅಂಕಗಳಿಂದ (32-11) ಮಣಿಸಿದ್ದರು. ಎರಡನೇ ಸೆಮಿಫೈನಲ್‌ನಲ್ಲಿ ಕೇವಲ 03 ಗುಣಗಳಿಂದ (26-23) ಧಾರವಾಡ ಬಾಲಕಿಯರು ಕಾರವಾರ ಜಿಲ್ಲಾ ಬಾಲಕಿಯರ ವಿರುದ್ಧ ಜಯಗಳಿಸಿದ್ದರು.
17 ವರ್ಷದ ಬಾಲಕರ ವಿಭಾಗದಲ್ಲಿ ಬಾಗಲಕೋಟೆಗೆ ಪ್ರಶಸ್ತಿ:ಸದರಿ ವಿಭಾಗದಲ್ಲಿ ಬಾಗಲಕೋಟೆ ಬಾಲಕರು ಶಿರಸಿ ಶೈಕ್ಷಣಿಕ ಜಿಲ್ಲೆಯ ವಿರುದ್ದ 09 ಅಂಕಗಳಿಂದ (13-04)ನಿರಾಯಾಸದ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಬಾಗಲಕೋಟೆ ತಂಡವು ಬೆಳಗಾವಿ ವಿರುದ್ಧ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಗದಗ ವಿರುದ್ಧ ಜಯ ಸಾಧಿಸಿದ್ದರು.