ಮೂರ್ನಾಡು ಪಿಯು ಕಾಲೇಜಿನ ತಂಡಕ್ಕೆ ಪ್ರಶಸ್ತಿ

KannadaprabhaNewsNetwork | Published : Nov 18, 2024 12:00 AM

ಸಾರಾಂಶ

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂರ್ನಾಡು ಪಿಯು ಕಾಲೇಜು ತಂಡ ಪ್ರಶಸ್ತಿಯನ್ನು ಪಡೆಯಿತು. ಒಟ್ಟು 11 ತಂಡಗಳು ಪಾಲ್ಗೊಂಡಿದ್ದವು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಮೂರ್ನಾಡು ಪದವಿ ಪೂರ್ವ ಕಾಲೇಜು ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂರ್ನಾಡು ಪಿಯು ಕಾಲೇಜಿನ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಿನ್ ಸಿ. ಯು ಮತ್ತು ಸಿ .ಎಸ್ ಪ್ರಜ್ಞ ತ೦ಡಕ್ಕೆ ಕಾಫಿ ಬೆಳೆಗಾರರಾದ ನೆರವಂಡ ಜಯ ಮುತ್ತಪ್ಪ ಪ್ರಾಯೋಜಿಸಿದ 3000 ರು.ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಸ್ಥಾನವನ್ನು ವಿದ್ಯಾನಿಕೇತನ ಪಿಯು ಕಾಲೇಜಿನ ಹರಿಕೃಷ್ಣನ್ ಎಂ ಮತ್ತು ಕಾರ್ಯಪ್ಪ ಜಿ.ಸಿ ಪಡೆದುಕೊಂಡರು. ಇವರಿಗೆ 2500 ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ದ್ವಿತೀಯ ಸ್ಥಾನವನ್ನು ಮಡಿಕೇರಿಯ ಸಂತ ಜೋಸೆಫ್ ಪಿಯು ಕಾಲೇಜಿನ ಮಹಮ್ಮದ್ ರಜೀಮ್ ಕೆ .ಎಸ್ ಹಾಗೂ ನಿಹಾಲ್ ಎಂ ಪಡೆದುಕೊಂಡರು. ಇವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 11 ತಂಡಗಳು ಪಾಲ್ಗೊಂಡಿದ್ದವು.

ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದ ದಾನಿ ನೆರ ವಂಡ ಜಯ ಮುತ್ತಪ್ಪ ಮಾತನಾಡಿ ರಸಪ್ರಶ್ನೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಆಯೋಜಿಸಲಾದ ಒಂದು ಕಾರ್ಯಕ್ರಮ. ವಿದ್ಯಾರ್ಥಿಗಳು ಇದರಲ್ಲಿ ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಹಾಗೂ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ, ಪೆಮ್ಮಡಿಯಂಡ ವೇಣು ಅಪ್ಪಣ್ಣ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಸಪ್ರಶ್ನೆ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ದೇವಕಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಕಾಲೇಜು ವತಿಯಿಂದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೂರ್ನಾಡು ಎಜುಕೇಶನ್ ಸೊಸೈಟಿಯ ಖಜಾಂಚಿ ಯತೀಶ್, ನಿರ್ದೇಶಕರಾದ ಪುದಿಯೊಕ್ಕಡ ಹರೀಶ್ ದೇವಯ್ಯ , ಕೆರೆಮನೆ ರಾಮಮೂರ್ತಿ, ಉಪನ್ಯಾಸಕರಾದ ರೋಹಿಣಿ, ಕುಮುದಾ , ಸರೋಜಿನಿ, ಕ್ವಿಜ್ ಮಾಸ್ಟರ್ ಸಿ ಎಸ್ ಸುರೇಶ್ ಪಾಲ್ಗೊಂಡಿದ್ದರು.

Share this article