ಕನ್ನಡಪ್ರಭ ವಾರ್ತೆ ಮೂಲ್ಕಿ
ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅತಿ ಅಗತ್ಯವಾಗಿದ್ದು ಸಾಹಿತ್ಯ ಸಮ್ಮೇಳನಗಳ ಮೂಲಕ ಯುವ ಸಾಹಿತಿಗಳು ಮೂಡಿಬರಲು ಸಾಧ್ಯ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಹೇಳಿದರು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೂಲ್ಕಿ ತಾಲೂಕು ಘಟಕದ ಆಶ್ರಯದಲ್ಲಿ ಮೂಲ್ಕಿಯ ಕಾರ್ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ, ಸರ್ಕಾರದ ಅನುದಾನದ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆದ್ದರಿಂದ ಸರ್ಕಾರವು ಕನ್ನಡ ಶಾಲೆಗಳಿಗೆ ಅಧ್ಯಾಪಕರ ನೇಮಕ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ರೀತಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ನೀಡಿದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ಯೆಪೋಟಿ ನೀಡಲು ಸಾಧ್ಯವೆಂದು ಹೇಳಿದರು.ಸಮ್ಮೇಳನಾಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ಮೂಡಿ ಬಂದಿದ್ದು ಸಮ್ಮೇಳನದ ಮೂಲಕ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿದೆ ಎಂದರು.
ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕನ್ನಡದಲ್ಲಿ ಶೇಕಡ 100 ಅಂಕ ಪಡೆದ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಮ್ಮೇಳನಕ್ಕೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಿದ ಪಾವಂಜೆಯ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಳ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ ಕಟೀಲು ಕ್ಷೇತ್ರ, ಸಂಜೆಯ ಉಪಹಾರ ಕಲ್ಪಿಸಿದ್ದ ಬಪ್ಪನಾಡು ಕ್ಷೇತ್ರದವರನ್ನು ಗೌರವಿಸಲಾಯಿತು.
ಸಮ್ಮೇಳನದ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ದಂಪತಿಯನ್ನು ಹಾಗೂ ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಗಣ್ಯರನ್ನು ಗೌರವಿಸಲಾಯಿತು.ಕಟೀಲು ಕ್ಷೇತ್ರದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೇಂದ್ರಿಯ ಸಮಿತಿಯ ಸದಸ್ಯ ಡಾ. ಮಾಧವ ಎಂ.ಕೆ., ಜಿಲ್ಲಾ ಗೌರವ ಕಾರ್ಯದರ್ಶಿ ಖಲೀದ್ ಕೆ.ಎಚ್., ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾಯರು, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಸಾಲ್ಯಾನ್ , ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ, ತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಡಾ. ವಾಸುದೇವ ಬೆಳ್ಳೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜೊಸ್ಸಿ ಪಿಂಟೋ ವಂದಿಸಿದರು. ಡಾ.ಎಚ್.ಬಿ. ಸುನೀತಾ ನಿರೂಪಿಸಿದರು.ವಿವಿಧ ವಿಚಾರಗೋಷ್ಠಿಗಳು ನಡೆದವು. ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದವನ್ನು ಪತ್ರಕರ್ತ ವಾಮನ ಕರ್ಕೇರ ಕೊಲ್ಲೂರು ನಡೆಸಿಕೊಟ್ಟರು.
ಸನ್ಮಾನ: ನಾಟಕ ಕಿರುಕ್ಷೇತ್ರದ ಕೃಷ್ಣಮೂರ್ತಿ ಕವತ್ತಾರು, ಸಾಹಿತ್ಯ ಸಂಶೋಧನೆಗಾಗಿ ಡಾ. ಇಂದಿರಾ ಹೆಗ್ಡೆ, ಸಾಹಿತಿ ಉದಯಕುಮಾರ ಹಬ್ಬು, ಪತ್ರಿಕೆ ರಂಗಭೂಮಿಗಾಗಿ ಪರಮಾನಂದ ಸಾಲ್ಯಾನ್, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಬಪ್ಪನಾಡು ಯಕ್ಷಗಾನ ಕಲಾವೃಂದದವರನ್ನು ಡಾ. ಹರಿಕೃಷ್ಣ ಪುನರೂರು ಸನ್ಮಾನಿಸಿದರು.