ರಾಮನಗರ: ಏಕಕಾಲದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಹಮ್ಮಿಕೊಂಡು ಸುಮಾರು 35 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಿದ ಶ್ರೀ ಯೆಡಿಯೂರು ಸಿದ್ದಲಿಂಗೇಶ್ವರ ಚಾರಿಟಬಲ್ ಟ್ರಸ್ಟ್ ಗೆ ನೋಬಲ್ ವಿಶ್ವದಾಖಲೆ ಸಂಸ್ಥೆಯಿಂದ ಪ್ರಶಸ್ತಿ ಲಭಿಸಿದೆ.
ರಾಮನಗರದ ಯೂನಿವರ್ಸಲ್ ಪಬ್ಲಿಕ್ ಶಾಲೆ, ಸರ್ಕಾರಿ ಪ್ರೌಢಶಾಲೆ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಾಲೆ ಮತ್ತು ಕಾಲೇಜು, ಚನ್ನಪಟ್ಟಣ ಸೇಂಟ್ ಆನ್ಸ್ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಹಮ್ಮಿಕೊಂಡಿದ್ದಾಗಿ ಟ್ರಸ್ಟ್‌ಗೆ ಪ್ರಕಟಣೆ ತಿಳಿಸಿದೆ.
ಈ ಮೊದಲು ಏಕಕಾಲದಲ್ಲಿ 26 ಸಾವಿರ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ನಡೆಸಲಾಗಿತ್ತು. ಈ ದಾಖಲೆಯನ್ನು ತಮ್ಮ ಟ್ರಸ್ಟ್ ಮುರಿದಿದೆ. ಹೀಗಾಗಿ ನೋಬಲ್ ವಿಶ್ವದಾಖಲೆ ಸಂಸ್ಥೆಯಿಂದ ಪ್ರಮಾಣ ಪತ್ರ ಲಭಿಸಿದೆ ಎಂದು ಹೇಳಿಕೆಯಲ್ಲಿ ಸಂತಸ ವ್ಯಕ್ತಪಡಿಸಲಾಗಿದೆ.ದಂತ ತಪಾಸಣಾ ಶಿಬಿರಗಳ ನೇತೃತ್ವವನ್ನು ಡಾ.ನಿರಂಜನ ಪರಮಶೆಟ್ಟಿ, ಡಾ.ಭಾಗ್ಯಲಕ್ಷ್ಮಿ ಫೌಜದಾರ್, ಡಾ.ವಿನಯ್ ಗುಗ್ಗರಿ, ಡಾ.ಸಂಗೀತ, ಡಾ.ಶ್ವೇತಾ, ಡಾ.ಸ್ವಾತಿ, ಡಾ.ರುಪ್ಸ, ಡಾ.ಪಾರ್ಥಬನ್ ವಹಿಸಿದ್ದರು. ಒಟ್ಟು 120 ತಜ್ಞ ವೈದ್ಯರು ಈ ಶಿಬಿರಗಳನ್ನು ನಡೆಸಿಕೊಟ್ಟಿದ್ದರು. ಶಿಬಿರಗಳು ಕೇವಲ ತಪಾಸಣೆಗೆ ಸೀಮಿತವಾಗದೆ ದಂತ ರಕ್ಷಣೆಯ ಬಗ್ಗೆ ಹಾಗೂ ತಂಬಾಕು ಪದಾರ್ಥಗಳ ಸೇವನೆಯಿಂದ ಬಾಯಿ ಹಾಗೂ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನೋಬಲ್ ವಿಶ್ವದಾಖಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೆ.ಡಿ.ಸಿ ದಂತ ಸಮೂಹದ ಡಾ.ನಿರಂಜನ ಪರಮಶೆಟ್ಟಿಯವರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದ್ದಾರೆ.