ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಅಂಗವಾಗಿ ಶುಕ್ರವಾರ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ಯೋಗ ದಸರಾ, ಯೋಗ ನೃತ್ಯರೂಪಕ ಮನರಂಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ದಸರಾ ವೀಕ್ಷಿಸಲು ನಾನಾ ದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ಯೋಗಕ್ಕೆ ಕೇಂದ್ರಾವಾಗಿರುವ ನಗರ ಮೈಸೂರು ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ದಸರಾ ನಮ್ಮ ನಾಡಿನ ಪ್ರತಿಷ್ಠೆ ಮತ್ತು ಹೆಮ್ಮೆಯನ್ನು ಹೆಚ್ಚಿಸುವಂತಹ ಹಬ್ಬವಾಗಿದ್ದು, ಇಂಥಹ ಹಬ್ಬದಲ್ಲಿ ಯೋಗಾ ದಸರಾವು ಕೂಡ ವಿಶ್ವದಲ್ಲೇ ಪ್ರಖ್ಯಾತಿ ಹೊಂದಿದೆ. ನವರಾತ್ರಿಯ 9 ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕ್ರೀಡೆ, ವಿಭಿನ್ನ ವೈಶಿಷ್ಟ್ಯವಾದ ಕಾರ್ಯಕ್ರಮಗಳನ್ನು ಲಕ್ಷಾಂತರ ಜನರು ವೀಕ್ಷಿಸಿ ಆನಂದಿಸುತ್ತಾರೆ ಎಂದರು.ಅನೇಕರು ಯೋಗ ಕಲಿಯಲು, ತಿಳಿದುಕೊಳ್ಳಲು ಹಾಗೂ ಅಭ್ಯಾಸ ಮಾಡುವುದಕ್ಕೆ ವಿಶ್ವದಾದ್ಯಂತ ಮೈಸೂರಿಗೆ ಆಗಮಿಸುತ್ತಾರೆ. ಯೋಗವು ನಮ್ಮ ಶರೀರ, ಮನಸ್ಸು ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ಪರಿಣಾಮಕಾರಿಯಾದ ಅಂಶವಾಗಿದ್ದು, ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಮಾನಸಿಕ ಖಿನ್ನತೆ ಎಲ್ಲದಕ್ಕೂ ಯೋಗ ಒಂದೇ ಸೂಕ್ತ ಪರಿಹಾರ ಎಂದು ಅವರು ಕಿವಿಮಾತು ಹೇಳಿದರು.
ಯೋಗದಲ್ಲಿ ಸಾಧನೆ ಮಾಡಿದ ಯೋಗ ಸಾಧಕರುಗಳಾದ ದೇವರಾಜು, ಯೋಗಕುಮಾರ್, ಸತ್ಯವತಿ, ಚಂದ್ರು, ಬಾಪು ಆರ್ ನಚೀಕೇತ ಹಾಗೂ ರಮಾ ಆರ್. ಕೆದ್ಲಾಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭೂಮಿ ಮೇಲಿನ ನಕ್ಷತ್ರವೆನ್ನುವ ವಿಶೇಷ ಚೇತನ ಮಕ್ಕಳು ಯೋಗದ ವಿವಿಧ ಭಂಗಿಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಅದರ ಮಹತ್ವ ಸಾರಿದರು. ಭೂಮಿ ಸೇನಾ ಜೋಷಿ ಅವರ ಧ್ವನಿಯಲ್ಲಿ ಮಿಲೆ ಸುರ್ ಮೇರಾ ತುಮಾರಾ... ಹಾಡಿಗೆ ಮೈಸೂರಿನ ವಿಸ್ಡಂಬ್ ವಿಶೇಷ ಚೇತನ ಶಾಲೆಯ ಮಕ್ಕಳು ಪ್ರದರ್ಶನ ಮಾಡಿದ ಯೋಗ ನೃತ್ಯಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾದಿಯಾಗಿ ನೆರೆದಿದ್ದವರು ಮನಸೋತು ಚಪ್ಪಾಳೆಗಳ ಮಳೆಗೈದರು.
ಇದರ ಜೊತೆಗೆ ಆಯುಷ್ ಆಯುರ್ವೇದಿಕ್ ವಿದ್ಯಾರ್ಥಿನಿಯರು ಯೋಗ ರೂಪದಲ್ಲಿ ಶಿವನ ಭಂಗಿಗಳನ್ನು ಸಾದರಪಡಿಸಿದರು. ವಿಜಯನಗರದ ಎಎಎಂ ಹಂಪಿಯ ಯೋಗಾ ವಿದ್ಯಾರ್ಥಿಗಳು ಕೂಡ ಯೋಗಾದ ಅನುಕೂಲಗಳನ್ನು ಸಾರಿದರು.