ಕನ್ನಡಪ್ರಭ ವಾರ್ತೆ ಮಂಡ್ಯ
ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಡಿ.6ರಂದು ಆಯೋಜಿಸಿದ್ದ ಅಧ್ಯಾಪನ ವಿಜ್ಞಾನೋತ್ಸವದ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕಾರ್ಯಕ್ರಮಕ್ಕೆ ಲಭಿಸಿದ ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಎಂ.ಜಿ.ದಿವ್ಯಶ್ರೀ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು ಎಂದರು.ಅತಿಥಿಗಳಾಗಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ನೊಬೆಲ್ ವರ್ಲ್ಡ್ ರೆಕಾರ್ಡ್‌ನ ರಾಜ್ಯ ನಿರ್ದೇಶಕ ಡಾ.ಎನ್.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಸಮಾಜ ಸೇವಕ ಬಿ.ಪುಟ್ಟಬಸವಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸುವರು ಎಂದರು.
ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಅಧ್ಯಾಪನ ವಿಜ್ಞಾನೋತ್ಸವವನ್ನು ಲಾರ್ಜೆಸ್ಟ್ ಸೈನ್ಸ್ ಎಕ್ಸ್‌ಪೋ ಇನ್ ಕರ್ನಾಟಕ ಎಂದು ಗುರುಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಟ್ರಸ್ಟ್ ಜೊತೆಗೂಡಿ ಸಹಕಾರ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಮೈಸೂರು ವಿವಿಯ ಉಪಕುಲಪತಿ ಶೈಲಜಾ ಸೇರಿದಂತೆ 60 ಮಂದಿಗೆ ನೊಬೆಲ್ ವರ್ಲ್ಡ್ ಪ್ರಶಸ್ತಿ ಪುರಸ್ಕಾರವನ್ನು ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ನೀಡಲಿದೆ ಎಂದು ವಿವರಿಸಿದರು.ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಯಿಂದ 8 ಮತ್ತು 9 ನೇ ತರಗತಿ ಮಕ್ಕಳಿಗೆ ಎರಡು ವಾರಗಳ ಎಂಗೆಸ್ಟ್ ಸೈಂಟಿಸ್ಟ್ ಪ್ರೋಗ್ರಾಮ್ ನಡೆಸಲಾಗುತ್ತಿದೆ. ವಿಜ್ಞಾನೋತ್ಸವದಲ್ಲಿ ಪಾಲ್ಗೊಂಡು ವಿಜೇತರಾದ 9ನೇ ತರಗತಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುವುದು. ಮಕ್ಕಳ ಪ್ರಯಾಣ ಸೇರಿದಂತೆ ಮತ್ತಿತರ ವೆಚ್ಚವನ್ನು ಟ್ರಸ್ಟ್ ವಹಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರವೀಣ್, ಸಹ ಸಂಯೋಜಕಿಯರಾದ ಪ್ರಥ್ವಿ.ಕೆ.ಆರ್, ಪ್ರಿಯಾಂಕ.ಕೆ.ಎಸ್. ಪ್ರೇಮ್‌ಕುಮಾರ್ ಇದ್ದರು.