ಕನ್ನಡಪ್ರಭ ವಾರ್ತೆ ವಿಜಯಪುರ: ಈಗಾಗಲೇ ಕಬ್ಬು ನುರಿಸುವಿಕೆ ಆರಂಭವಾಗಿದ್ದು, ಕೆಲವು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ₹ 2700 ರಿಂದ 3000 ವರೆಗೆ ಮಾತ್ರ ಬೆಲೆ ಘೋಷಣೆ ಮಾಡಿವೆ. ಪ್ರಸ್ತಕ ಸಾಲಿನ ಕಬ್ಬು ನುರಿಸುತ್ತಿರುವ ರೈತರಿಗೆ ₹ 4000 ಕಬ್ಬಿನ ದರವನ್ನು ಎಲ್ಲಾ ಫ್ಯಾಕ್ಟರಿ ಮಾಲೀಕರಿಂದ ನೀಡಲು ನಿರ್ದೇಶನ ನೀಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದರು.
ಜಿಲ್ಲಾ ಅನ್ನದಾತ ಯುವ ರೈತ ಸಂಘ, ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ನಿಗದಿಪಡಿಸಿರುವ ಎಫ್‌ಆರ್‌ಪಿ ದರ ರೈತರಿಗೆ ಲಾಭದಾಯಕವಾಗಿಲ್ಲ.₹ 4000 ಬೇಡಿಕೆ ಇದ್ದು, ಈಡೇರಿಸುವಂತೆ ವಿನಂತಿಸಿದರು.2022-23ನೇ ಸಾಲಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ₹ 150 ಹೆಚ್ಚುವರಿ ಹಣ ಎಲ್ಲ ರೈತರಿಗೂ ಫ್ಯಾಕ್ಟರಿ ಮಾಲೀಕರಿಂದ ನೀಡಲು ನಿರ್ದೇಶನ ನೀಡಬೇಕು. ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಒತ್ತಾಯಿಸಿದರು.ಜಿಲ್ಲಾ ಅನ್ನದಾತ ಯುವ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, 2023-24ರಲ್ಲಿ ತೀವ್ರ ಬರಗಾಲವಿದ್ದು, ಇನ್ನು ಕೆಲವು ರೈತರಿಗೆ ಬೆಳೆವಿಮ ಹಣ ಮತ್ತು ಬೆಳೆ ಪರಿಹಾರ ಜಮೆಯಾಗಿಲ್ಲ. ತಕ್ಷಣ ಸರ್ಕಾರದಿಂದ ಜಮೆ ಮಾಡಿಸಬೇಕು. 2017-18ರಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ ಕೆಲವು ರೈತರ ಸಾಲ ಮನ್ನಾ ಬಾಕಿ ಉಳಿಸಿದೆ. ತೊಂದರೆಯಿರುವ ರೈತರಿಗೆ ಶೀಘ್ರ ಸಾಲ ನೀಡಬೇಕೆಂದು ವಿನಂತಿಸಿದರು.ಕೊಲ್ಹಾರ ಕಲ್ಲಿನಾಥ ಸ್ವಾಮೀಜಿ, ರೈತ ಮುಖಂಡರಾದ ಚಂದ್ರಗೌಡ ಪಾಟೀಲ, ಕೃಷ್ಣಪ್ಪಗೌಡ ವಟಾರ, ಬಾಬು ಕಲಬುರಗಿ, ಸಂಗನಾಥ ಹುಲಗೇರಿ, ಉಮೇಶ ಮುಳಸಾವಳಗಿ, ಬಸವರಾಜ ರೊಳ್ಳಿ, ಸುರೇಶ ವಟಾರ, ಈರಣ್ಣ ನಾಗನೂರ, ಪಾಂಡು ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.