ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯು ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಭಾರತ ನಿರ್ಮಾಣದಲ್ಲೂ ವಿಶ್ವಕರ್ಮರ ಪಾತ್ರ ದೊಡ್ಡದಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು. ನಿಮ್ಮ ಪರವಾಗಿ ನಾನು ಧ್ವನಿಯಾಗಿ ಇರುತ್ತೇನೆ ಎಂದು ಅವರು ಭರವಸೆ ನೀಡಿದರು.ಭಾರತವು ಪಾಶ್ಚಾತ್ಯ ದೇಶಗಳಿಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಬೇಕು. ಹಿಂದಿನಿಂದಲೂ ಹೇಳಿಕೊಂಡು ಬಂದಂತೆ ಬಡತನ ನಿವಾರಣೆಯೊಂದೇ ನಮ್ಮ ಸರ್ಕಾರದ ಗುರಿಯಲ್ಲ. ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಪ್ರಧಾನಿ ಮೋದಿ ಗುರಿ ಹೊಂದಿದ್ದಾರೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ನಿಟ್ಟರಹಳ್ಳಿಯ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ,‘ದೇಗುಲಗಳಲ್ಲಿ ಎಲ್ಲರೂ ಪೂಜಿಸುವ ಮೂರ್ತಿಗಳಿಗೆ ನೈಪುಣ್ಯತೆ ನೀಡುವ ಕೌಶಲ ಹೊಂದಿರುವ ಸಮಾಜ ನಮ್ಮದಾಗಿದೆ. ವಿಶ್ವಕರ್ಮ ಸಮಾಜಕ್ಕೂ ಹಾಗೂ ಮೈಸೂರು ರಾಜಮನೆತನಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ, ಅರಮನೆಯಲ್ಲಿ ನಡೆಯುವ ದಸರಾ ಕಾರ್ಯಕ್ರಮದ ವೇಳೆ ವಿಶ್ವಕರ್ಮ ಸಮಾಜದ ಗುರುಗಳನ್ನು ಆಹ್ವಾನಿಸಬೇಕು; ನಮ್ಮ ಸಮಾಜದ ಸಾಧಕರನ್ನು ಆಹ್ವಾನಿಸಿ ಗೌರವಿಸಬೇಕು ಎಂದು ಯದುವೀರ್ಅವರನ್ನು ಕೋರಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಶಿಲ್ಪಿ ಅರುಣ್ಯೋಗಿರಾಜ್, ‘ಬಿಗ್ಬಾಸ್’ ರಿಯಾಲಿಟಿ ಶೋ ವಿಜೇತ ಕಾರ್ತಿಕ್ ಮಹೇಶ್ ಹಾಗೂ ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಅವರಿಗೆ ‘ವಿಶ್ವಕರ್ಮ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ನಂದಕುಮಾರ್, ವೇದಿಕೆಯ ಅಧ್ಯಕ್ಷ ಕೆಂಡಗಣ್ಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಟಿ.ಎ. ಸಿದ್ದರಾಜು, ಅರುಣ್ ಯೋಗಿರಾಜ್ ತಾಯಿ ಸರಸ್ವತಿ, ನಗರ ಪಾಲಿಕೆ ಮಾಜಿ ಸದಸ್ಯ ರಮಣಿ, ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ಪವಿತ್ರಾ ಪ್ರಭಾಕರ್ ರೆಡ್ಡಿ, ಮುಖಂಡರಾದ ವೆಂಕಟೇಶ್, ಕುಮಾರ್, ಗೌರೀಶ್, ಬಸವರಾಜ್, ಶಿವಣ್ಣ ಹಾಗೂ ವೇದಿಕೆಯ ಪದಾಧಿಕಾರಿಗಳು ಇದ್ದರು.