ಮಂಗಳೂರು: ಇಂದು ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತಿದೆ. ಇಂದಿನ ಯುವಜನತೆ ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರದಂತಹ ಕ್ರಿಮಿನಲ್ ಕೃತ್ಯಗಳಲ್ಲಿ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ವಿಚಾರ. ಸತತ ಜಾಗೃತಿಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ.ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ನಡೆದ ಮಾನವ ಹಕ್ಕುಗಳು ಎನ್ನುವ ವಿಶೇಷ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆನ್‌ಲೈನ್ ವಂಚನೆಯ ಬಗ್ಗೆ ಜನತೆ ಜಾಗೃತರಾಗಬೇಕು. ನಕಲಿ ಕರೆಗೆ ಸ್ಪಂದಿಸದೆ ಜಾಣ್ಮೆ ಪ್ರದರ್ಶಿಸಬೇಕು ಎಂದರು.ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್‌ಮೇಲ್, ಯುಪಿಎ ಸ್ಕ್ಯಾನ್ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವುದು, ಸೆಲೆಬ್ರಿಟಿಗಳ ಫೋಟೋಗಳನ್ನು ಮಾರ್ಫ್ ಮಾಡಿ ವಂಚಿಸುವುದು, ಎಪಿಕೆ ಫೈಲ್‌ಗಳ ಮೂಲಕ ವಂಚನೆ, ಕೆವೈಸಿ, ಆಧಾರ್ ಅಪ್ಡೇಟ್ ಹೆಸರಲ್ಲಿ ವಂಚನೆ, ಹಣ ಡಬಲ್ ಆಗುತ್ತದೆ ಎಂದು ಹಣ ಹೂಡಿಸಿ ಮೋಸ ಮಾಡುವುದು ಹೆಚ್ಚಾಗುತ್ತಿದೆ ಎಂದವರು ಹೇಳಿದರು.