ಗದಗ: ಮಕ್ಕಳನ್ನು ಮಾರಾಟ ಮಾಡುವುದು ಗಂಭೀರ ಸ್ವರೂಪದ ವಿಷಯವಾಗಿದ್ದು, ಮಾನವ ಕಳ್ಳಸಾಗಾಣಿಕೆ ಕುರಿತು ಜಾಗೃತಿ ಅವಶ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.
ಮಕ್ಕಳ ಕಳ್ಳತನ ಮಾಡಿ ಮಗುವಿಗೆ ದಬ್ಬಾಳಿಕೆ ಮಾಡಿ ಭಿಕ್ಷಾಟನೆ, ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಇತರ ದುಷ್ಕೃತ್ಯಗಳಿಗೆ ಉಪಯೋಗಿಸುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆ ಎನ್ನುವುದು ಆಧುನಿಕ ಸಮಾಜವನ್ನು ಕಾಡುತ್ತಿರುವ ಅತ್ಯಂತ ಕ್ರೂರ ಮತ್ತು ಅಮಾನವೀಯ ಅಪರಾಧವಾಗಿದೆ. ಈ ಪಿಡುಗನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅತ್ಯಾವಶ್ಯಕವಾಗಿದೆ ಎಂದರು.
ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರ್ತುಜಾ ಖಾದ್ರಿ ಮಾತನಾಡಿ, ಈಗಿನ ಕಾಲಮಾನದಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಈ ಸಾರ್ವಜನಿಕರಲ್ಲಿ ಅರಿವು ಇರಬೇಕು ಎಂದು ಹೇಳಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ ಜಿ. ಮಣ್ಣೂರು ಮಾತನಾಡಿದರು. ವೃತ್ತ ಪೊಲೀಸ್ ನಿರೀಕ್ಷಕರಾದ ಎಲ್.ಕೆ. ಜೂಲಕಟ್ಟಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಎಸ್.ಎಸ್. ಪಟ್ಟಣಶೆಟ್ಟರ, ಪ್ರಾಂಶುಪಾಲ ವೈ.ಎಸ್. ಮತ್ತೂರು ಇದ್ದರು. ಜಯಶ್ರೀ ಆರ್. ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ರಮೇಶ ಕಳ್ಳಿಮನಿ ವಂದಿಸಿದರು.