ರಸ್ತೆ ಸಂಚಾರ, ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಿ

KannadaprabhaNewsNetwork |  
Published : May 28, 2025, 12:06 AM IST
ಸಂಚಾರ ಜಾಗೃತಿ ಕೇಂದ್ರ ಉದ್ಘಾಟಿಸಿದರು | Kannada Prabha

ಸಾರಾಂಶ

ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಅರಿವು, ಶಿಕ್ಷಣ, ಜಾಗೃತಿ ನೀಡಲಾಗುತ್ತಿದೆ.

ಕಾರವಾರ: ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮೀತ್ ಸಿಂಗ್ ಹೇಳಿದರು.

ಅವರು ಸೋಮವಾರ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಜಾಗೃತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮ ಪಾಲಿಸಿ ಜಾಗೃತೆಯಿಂದ ವಾಹನ ಚಲಾಯಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಸಂಚಾರ ಜಾಗೃತಿ ಕೇಂದ್ರಕ್ಕೆ ಸಾರ್ವಜನಿಕರನ್ನು ಕರೆ ತಂದು ಮಾಹಿತಿ ಮತ್ತು ಅರಿವು ಮೂಡಿಸಬೇಕು. ರಸ್ತೆ ಸಂಚಾರ ನಿಯಮಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಮಾಡಬೇಕು. ಸಾಮಾಜಿಕ ಜಾಲತಾಣ, ಟಿವಿ, ಪತ್ರಿಕೆಗಳಲ್ಲಿ ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.

ಎಲ್ಲ ತಾಲೂಕಿನಲ್ಲೂ ಅರಿವು ಕಾರ್ಯಕ್ರಮ ಮಾಡಲೇಬೇಕು. ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಮಾಡಿ ಅಪಘಾತದಿಂದ ಮೃತ ಪಟ್ಟರೆ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ನೋವುಂಟಾಗುತ್ತದೆ. ಸಂಚಾರ ನಿಯಮಗಳು ಪೊಲೀಸರಿಗೆ ಮಾತ್ರ ಸೀಮಿತವಲ್ಲ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು, ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ ಅನಾಹುತಗಳನ್ನು ತಡೆಯಲು ಪೊಲೀಸರೊಂದಿಗೆ ಸಹಕರಿಸುವಂತೆ ಹೇಳಿದರು.

ಪೊಲೀಸ್ ವರಿಷ್ಠ ನಾರಾಯಣ ಎಂ, ಇಲ್ಲಿನ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಅರಿವು, ಶಿಕ್ಷಣ, ಜಾಗೃತಿ ನೀಡಲಾಗುತ್ತಿದೆ. ಆರ್.ಟಿ.ಓ ವತಿಯಿಂದ ವಾಹನ ಕಂಡೀಷನ್ ಕುರಿತು ಹಲವು ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಪತ್ರಿ ವರ್ಷ ಜಿಲ್ಲೆಯಲ್ಲಿ 300 ರಿಂದ 400 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ, ಪ್ರತಿಯೊಬ್ಬರು ವಾಹನ ಸಂಚಾರ ಮಾಡುವಾಗ ರಸ್ತೆ ಸಂಚಾರ ಸುರಕ್ಷತಾ ನಿಯಮ ಪಾಲನೇ ಮಾಡಿದಲ್ಲಿ ಅಪಘಾತಗಳು ಸಂಭವಿಸದಂತೆ ತಡೆಯಬಹುದು. ಪ್ರತಿ ಶುಕ್ರವಾರ ಸಂಚಾರಿ ಜಾಗೃತಿ ಕೇಂದ್ರದಲ್ಲಿ ಚಾಲಕರು, ವಾಹನ ತರಬೇತುದಾರರು, ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಕರೆ ತಂದು ರಸ್ತೆ ಸಂಚಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುವುದು. ಮದ್ಯಪಾನ ಸೇವಿಸಿ ವಾಹನ ಚಲಾಯಿಸುವರಿಗೆ ದಂಡ ವಿಧಿಸುವುದು ಮಾತ್ರ ಅಲ್ಲದೇ ಅವರನ್ನು ಕರೆ ತಂದು ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿಡಿಯೋ ಪ್ರಸಾರ ಮಾಡಿ ಮಾಹಿತಿ ನೀಡಲಾಗುವುದು. ಈ ಕೇಂದ್ರವು ನಿರಂತರವಾಗಿ ನಡೆಯಲಿದ್ದು, ಇಲ್ಲಿ 24*7 ಸಂಚಾರ ಸುರಕ್ಷತಾ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮೂರ್ತಿ, ಡಿ.ವೈ.ಎಸ್.ಪಿ ಗಿರೀಶ್, ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ ದೇವೇಂದ್ರಪ್ಪ, ಆರ್.ಟಿ.ಓ ಅಧಿಕಾರಿ ಅನಿಲ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಖಾನ್ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್