ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಪಟ್ಟಣದ ಶಿಡ್ಲಘಟ್ಟ ಡಿವಿಯೇಷನ್ ರಸ್ತೆಯಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಬಸವಾಚಾರಿ, ಅಲಿಯಾಸ್ ಶ್ಯಾಮ್ ಅವರ ಮೃತದೇಹವು, ಮನೆಯಲ್ಲಿನ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಇವರ ಪತ್ನಿ ಸುಮಾ (೩೮) ಅವರು, ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತ ದಂಪತಿ ಪುತ್ರ ಶಾಲೆಯಿಂದ ಮನೆಗೆ ಬಂದಾಗ, ತನ್ನ ತಂದೆ, ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡ ಕೂಡಲೇ, ತನ್ನ ದೊಡ್ಡಪ್ಪನಿಗೆ ವಿಚಾರ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ಮೃತನ ಸಹೋದರ, ತಕ್ಷಣ ಧಾವಿಸಿ ನೋಡುವಷ್ಟರಲ್ಲಿ ಬಸವಾಚಾರಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿರುವುದು ಗೊತ್ತಾಗಿದೆ.ಪತ್ನಿಯನ್ನು ಜಿಮ್ ಮಾಡುವ ಡಂಬಲ್ ನಿಂದ ಹೊಡೆದು ಸಾಯಿಸಿ, ತಾನೂ ಸೀರೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಜಿಮ್ ನಲ್ಲಿ ಬಳಕೆ ಮಾಡುವ ಡಂಬಲ್ ವೊಂದು ಮೃತನ ಪತ್ನಿ ಸುಮಾ ಅವರ ಮೃತದೇಹದ ಬಳಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿ ಹಾಗೂ ವಿಜಯಪುರ ಪೊಲೀಸರು ಬಂದು, ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಇಬ್ಬರ ಸಾವಿಗೆ ನಿಖರ ಕಾರಣವೇನೆಂದು, ಪೊಲೀಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.