- ಹೊನ್ನಾಳಿಯಲ್ಲಿ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶಾಸಕ ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಡೆಂಘೀಜ್ವರ, ಮಲೇರಿಯಾ ರೋಗಗಳು ಮನುಷ್ಯನ ಪ್ರಾಣಕ್ಕೆ ಕುತ್ತು ತರುವ ಅಪಾಯಕಾರಿ ರೋಗಗಳಾಗಿವೆ. ವಿಶೇಷವಾಗಿ ಈ ರೋಗಗಳು ಸೊಳ್ಳೆಗಳ ಕಡಿತದಿಂದ ಬರಲಿದ್ದು, ಜನರು ಹೆಚ್ಚು ಜಾಗೃತರಾಗಿರಬೇಕು. ಮನೆ ಹಾಗೂ ಹೊರಗಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಘೀಜ್ವರ ನಿಯಂತ್ರಣ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದೆ. ರಸ್ತೆ, ಚರಂಡಿಗಳು ಹಾಗೂ ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯಾಗುವಂಥ ಸಂಭವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಜ್ವರದ ಲಕ್ಷಣಗಳು ಕಂಡ ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ತೆರಳಿ ವೈದ್ಯರ ಬಳಿ ರಕ್ತಪರೀಕ್ಷೆ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಪ್ರಾಣಾಪಾಯದಿಂದ ಪಾರಾಗಬಹುದು ಎಂದರು.ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ, ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಘೀಯಂಥ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇದು ಈಡಿಸ್ ಸೊಳ್ಳೆಗಳಿಂದ ಹರಡುವಂಥದ್ದಾಗಿದೆ. ನಾವುಗಳು ಮನೆಗಳಲ್ಲಿ ಶೇಖರಿಸುವ ನೀರು, ಬಳಸಿ ಎಸೆಯುವ ಟೀ ಕಪ್, ಪ್ಲಾಸ್ಟಿಕ್ ಬಾಟಲ್ ಮುಂತಾದ ನಿರುಪಯುಕ್ತ ವಸ್ತುಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗುತ್ತದೆ. ಇದರಿಂದ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ತಾಲೂಕು ಆರೋಗ್ಯ ಹಿರಿಯ ಆರೋಗ್ಯ ನಿರೀಕ್ಷಕ ಶಿವಪದ್ಮ, ಎಂ.ಬಿ. ನಿಂಗಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಕರಾದ ಎಂ.ಎಚ್. ಗೀತಾ, ಆರೋಗ್ಯ ಸಹಾಯಕರಾದ ಟಿ.ನಾಗರತ್ನ, ಪುರಸಭೆ ಆರೋಗ್ಯ ನಿರೀಕ್ಷಕ ಪರಮೇಶ್ವರ ನಾಯ್ಕ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.- - -
ಕೋಟ್ ಹೊನ್ನಾಳಿ ತಾಲೂಕಿನಲ್ಲಿ ಜನವರಿಯಿಂದ ಜೂನ್‌ವರೆಗೆ ಸುಮಾರು 35 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು ಈ ಒಂದು ವಾರದಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ. ಚಿಕೂನ್ ಗುನ್ಯಾ 16 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗಳಿಗೆ ಭೇಟಿ ನೀಡಿ, ಲಾರ್ವಾ ಸಮೀಕ್ಷೆ ನಡೆಸಲಾಗುವುದು- ಡಾ.ಗಿರೀಶ್, ತಾಲೂಕು ಆರೋಗ್ಯಾಧಿಕಾರಿ, ಹೊನ್ನಾಳಿ
- - - -28ಎಚ್.ಎಲ್.ಐ3:ಹರಿಹರ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಘೀ, ಮಲೇರಿಯಾ ಜ್ವರ ನಿಯಂತ್ರಣ ಜಾಗೃತಿ ಜಾಥಾಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಚಾಲನೆ ನೀಡಿದರು.