ವಂದೇ ಭಾರತ್ ಸೇರಿ ಹಲವು ರೈಲು ದರ ಇಳಿಕೆ ಚಿಂತನೆ: ಸೋಮಣ್ಣ

KannadaprabhaNewsNetwork |  
Published : Jun 30, 2024, 12:51 AM IST
ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ   | Kannada Prabha

ಸಾರಾಂಶ

ವಂದೇ ಭಾರತ್‌ ಸೇರಿ ಹಲವು ರೈಲುಗಳ ಪ್ರಯಾಣ ದರ ಪರಿಷ್ಕರಣೆ (ಇಳಿಕೆ) ಕುರಿತು ಚಿಂತನೆ ನಡೆದಿರುವುದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಂದೇ ಭಾರತ್‌ ಸೇರಿ ಹಲವು ರೈಲುಗಳ ಪ್ರಯಾಣ ದರ ಪರಿಷ್ಕರಣೆ (ಇಳಿಕೆ) ಕುರಿತು ಚಿಂತನೆ ನಡೆದಿರುವುದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡ ಹಾಗೂ ಮಧ್ಯಮ ವರ್ಗದವದರಿಗೆ ರೈಲ್ವೆ ಪ್ರಯಾಣ ಇನ್ನಷ್ಟು ಅಗ್ಗಗೊಳಿಸುವ ಗುರಿಯಿದೆ. ವಂದೇ ಭಾರತ್‌ ರೈಲುಗಳಲ್ಲಿ ಅವರಿಗೂ ಸಂಚಾರ ಮಾಡುವಂತೆ ಸಾಧ್ಯವಾಗಿಸಬೇಕು. ಹೀಗಾಗಿ ವಂದೇ ಭಾರತ್‌ ಸೇರಿ ರೈಲುಗಳ ಟಿಕೆಟ್‌ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದರು.

‘ವಂದೇ ಭಾರತ್‌ ರೈಲುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ, ಸಾಮಾನ್ಯ ರೈಲುಗಳ ಅಭಿವೃದ್ಧಿಗೆ ಒತ್ತು ಸಿಗುತ್ತಿಲ್ಲ ಎಂಬ ವಿಚಾರ ಗಮನಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆಸಿದ ಸಮಾಲೋಚನೆ ವೇಳೆ ಇದನ್ನು ಚರ್ಚಿಸಲಾಗಿದೆ’ ಎಂದರು.

2024-25ರಲ್ಲಿ ಎನ್‌ಡಿಎ ಸರ್ಕಾರ,ರಾಜ್ಯದ ರೈಲ್ವೆ ಇಲಾಖೆ ಕಾಮಗಾರಿಗಳಿಗೆ ₹ 7524 ಕೋಟಿ ನೀಡುತ್ತಿದೆ. ಕಳೆದ ಹತ್ತು ವರ್ಷದಲ್ಲಿ 365 ಕಿಮೀ ಹೊಸ ಮಾರ್ಗ ಹಾಗೂ 1268 ಕಿಮೀ ಜೋಡಿಹಳಿ ಕಾಮಗಾರಿ ಪೂರ್ಣಗೊಂಡಿವೆ. ಈ ವೇಳೆ 534 ರೈಲ್ವೇ ಮೇಲ್ಸೇತುವೆ, ಕೆಳ ಸೇತುವೆ (ಆರ್‌ಒಬಿ-ಆರ್‌ಯುಬಿ) ನಿರ್ಮಿಸಿ ಲೇವಲ್‌ ಕ್ರಾಸಿಂಗ್‌ ತೆರವು ಮಾಡಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ರಾಜ್ಯದ ಬೇಡಿಕೆಗೆ ಸ್ಪಂದನೆ:

ಕನಕಪುರ, ಸಾತನೂರು, ಕೊಳ್ಳೇಗಾಲ, ಮಳವಳ್ಳಿ ಯಳಂದೂರು ಮಾರ್ಗವಾಗಿ ಹೋಗುವ ಹೆಜ್ಜಾಲ-ಚಾಮರಾಜನಗರ ರೈಲ್ವೆ ಯೋಜನೆಗೆ ಸರ್ವೇ, ಡಿಪಿಆರ್‌ ನಡೆಸಲಾಗುವುದು. ಅದರಂತೆ ರಾಜ್ಯದಲ್ಲಿ ಅಗತ್ಯವಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸ್ಪಂದಿಸಲಿದೆ ಎಂದು ಹೇಳಿದರು.

ಅನುದಾನ ಒಪ್ಪಂದ ಹಿಂಪಡೆದ ರಾಜ್ಯ ಸರ್ಕಾರ:

ರೈಲ್ವೆ ಇಲಾಖೆಯಿಂದ ರಾಜ್ಯದಲ್ಲಿ ₹ 1699 ಕೋಟಿ ವೆಚ್ಚದ 93 ಆರ್‌ಒಬಿ-ಆರ್‌ಯುಬಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಇವುಗಳಲ್ಲಿ 49 ಕಾಮಗಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗ ವೆಚ್ಚ ಹಂಚಿಕೆ ಆಧಾರದ ಮೇಲೆ ಅನುಮೋದನೆ ನೀಡಲಾಗಿತ್ತು. ಇದರಂತೆ ರಾಜ್ಯ ಸರ್ಕಾರ ₹ 849 ಕೋಟಿ ಕೊಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಇದರಲ್ಲಿ 32 ಕಾಮಗಾರಿಗಳಿಗೆ ನೀಡಿದ್ದ ವೆಚ್ಚ ಹಂಚಿಕೆ ಒಪ್ಪಿಗೆ ಹಿಂಪಡೆದಿದೆ. ಈ 32 ಯೋಜನೆಗಳ ಪೈಕಿ ಅತ್ಯಂತ ಮಹತ್ವದ 14 ಆರ್‌ಒಬಿ ಕಾಮಗಾರಿಗೆ ರೈಲ್ವೆ ಇಲಾಖೆಯೆ ₹ 204 ಕೋಟಿ ವೆಚ್ಚ ಭರಿಸಲಿದೆ. ಉಳಿದ ₹ 590 ಕೋಟಿ ವೆಚ್ಚದ 18 ಕಾಮಗಾರಿಗಳಿಗೂ ಕೇಂದ್ರ ಶೇ. 100 ಅನುದಾನ ನೀಡಲಿದೆ ಎಂದು ತಿಳಿಸಿದರು.ಕನ್ನಡಿಗರಿಗೆ ರೈಲ್ವೆ ಉದ್ಯೋಗಕ್ಕೆ ಕ್ರಮ

ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಕ್ರಮ ವಹಿಸಲಾಗುವುದು. ರಾಜ್ಯದಲ್ಲಿನ ನೈಋತ್ಯ ಸೇರಿ ಇತರೆ ವಲಯಗಳ ರೈಲ್ವೆಯಲ್ಲಿ ಅನ್ಯ ರಾಜ್ಯದವರು ತುಂಬಿದ್ದಾರೆ ಎಂಬ ಆಕ್ಷೇಪವಿದೆ. ಈ ಸಂಬಂಧ ಕೇಂದ್ರದ ಜೊತೆಗೆ ಚರ್ಚಿಸಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!