ಕನ್ನಡಪ್ರಭ ವಾರ್ತೆ ಉಡುಪಿ
ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅದನ್ನು ಪತ್ತೆ ಹಚ್ಚುವ, ತಡೆಗಟ್ಟಲು ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದ್ದು, ಕ್ಯಾನ್ಸರ್‌ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು ಈ ದಿನದ ಪ್ರಾಥಮಿಕ ಗುರಿಯಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರತ್ನ ಹೇಳಿದ್ದಾರೆ.ಸೋಮವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಅಪ್ಪು ಅಭಿಮಾನಿಗಳ ಬಳಗ ಸಹಯೋಗದೊಂದಿಗೆ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ವಾಸುದೇವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 30 ವರ್ಷಗಳ ಹಿಂದೆ ಕ್ಯಾನ್ಸರ್‌ನ್ನು ಶ್ರೀಮಂತ ರಾಷ್ಟ್ರಗಳ ಕಾಯಿಲೆ ಎಂದು ಭಾವಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನವರಲ್ಲಿ ಈ ಕಾಯಿಲೆ ಕಾಣುತ್ತಿದ್ದೇವೆ. ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರಿಂದ ಅದನ್ನು ತಡೆಗಟ್ಟಲು ಸಾಧ್ಯ ಎಂದರು.ಜಿಲ್ಲಾಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ. ವೆಂಕಟೇಶ್ ಉಪನ್ಯಾಸ ನೀಡಿ ಮಾತನಾಡಿ, ಕ್ಯಾನ್ಸರ್ ಕಾಯಿಲೆಯ ಬಗ್ಗೆ ನಾಗರಿಕರು ಭಯ ಬಿಡಬೇಕು. ಕ್ಯಾನ್ಸರ್ ಕಾಯಿಲೆಗೆ ಒಳಗಾದವರನ್ನು ಟಾರ್ಗೆಟ್ ಥೆರಫಿ ಚಿಕಿತ್ಸೆ ನೀಡುವ ಮೂಲಕ ದೀರ್ಘ ಅವಧಿಯವರೆಗೆ ಬದುಕಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂದರು.ಕ್ಯಾನ್ಸರ್ ರೋಗಿಗಳ ಮೇಲೆ ಐದು ವರ್ಷ ನಿಗಾ ಇರಿಸಿ, ಮತ್ತೆ ಕಾಯಿಲೆ ಬರದಿದ್ದಲ್ಲಿ ಶೇ. 90 ರಷ್ಟು ಗುಣಮುಖರನ್ನಾಗಿ ಮಾಡಬಹುದು ಎಂದ ಅವರು, ಯಾವುದೇ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಸೌಕರ್ಯಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುವುದು ಎಂದರು.
ಸ್ತ್ರೀ ರೋಗ - ಪ್ರಸೂತಿ ತಜ್ಞ ಡಾ. ಶಶಾಂಕ್ ಕಿಣಿ, ಪುಷ್ಪಲತಾ ಮಾಹಿತಿ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್ ಅಶೋಕ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖದಾರವರಿಗೆ ಆಹಾರದ ಕಿಟ್‌ಗಳನ್ನು ಹಾಗೂ ನಗದು ವಿತರಿಸಲಾಯಿತು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಸುಜಿತ್ ಹಾಗೂ ಡಾ. ಮಂಜುನಾಥ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಗಿರೀಶ್ ಕಡ್ಡಿಪುಡಿ, ಅಪ್ಪು ಅಭಿಯಾನಿ ಬಳಗದ ಪ್ರೀತಮ್ ಬಿ.ಎಸ್, ಎನ್.ಸಿ.ಡಿ ಕಾರ್ಯಕ್ರಮದ ಜಿಲ್ಲಾ ಸಮಾಲೋಚಕಿ ಡಾ. ಅಂಜಲಿ, ಆಪ್ತ ಸಮಾಲೋಚಕ ಮನು ಮತ್ತಿತರರಿದ್ದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ಸ್ವಾಗತಿಸಿದರು. ಕ್ಷಯ ಘಟಕದ ಹಿರಿಯ ಆರೋಗ್ಯ ಮೇಲ್ವಿಚಾರಕ ಪ್ರಶಾಂತ್ ಶೆಟ್ಟಿ ನಿರೂಪಿಸಿ, ವಂದಿಸಿದರು.