ವಿಶ್ವ ಮಾದಕವಸ್ತು, ಅಕ್ರಮ ಸಾಗಣೆ ವಿರೋಧಿ ದಿನ ಜಾಗೃತಿ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹಾಸನವಿವಿಧ ರೀತಿಯ ಮಾದಕವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ಮಾಡಬಾರದು. ಈ ಬಗ್ಗೆ ಯುವಜನತೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾದಕವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನದ ಜಾಗೃತಿ ಜಾಥಾಕ್ಕೆ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿ ಮಾತನಾಡಿದರು.ಯಾವುದೇ ರೀತಿಯ ಮಾದಕವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ಮಾಡಬಾರದು. ಯುವ ಸಮೂಹವೇ ಹೆಚ್ಚು ಡ್ರಗ್ಸ್ ವ್ಯಸನಕ್ಕೆ ಈಡಾಗಿರುವ ಕಾಲ ಬಂದಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮಾದಕವಸ್ತು ವ್ಯಸನ ಸಮಸ್ಯೆಯು ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಈ ವರ್ಷದ ಘೋಷಣೆ ಎಂದರೆ ‘ಸಾಕ್ಷ್ಯಗಳು ಸ್ಪಷ್ಟವಾಗಿದೆ-ತಡೆಗಟ್ಟವಲ್ಲಿ ಹೂಡಿಕೆ ಮಾಡಿ’ ಎಂಬುವುದಾಗಿದೆ. ಅಂದರೆ ಮಾದಕವಸ್ತಗಳನ್ನು ಬಳಸುವ ಜನರಿಗೆ ಗೌರವ ಮತ್ತು ಸಹಾನುಭೂತಿಯಿಂದ ಚಿಕಿತ್ಸೆ ನೀಡಿ ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಕೆಲ ಬೆಳವಣಿಗೆಯಿಂದ ಎಲ್ಲಾ ಕಡೆ ಇಂದು ಹಣ ಒಂದು ಇದ್ದರೆ ಎಲ್ಲಾ ಸಿಗುತ್ತದೆ ಎಂದುಕೊಂಡಿದ್ದೇವೆ. ದುಶ್ಚಟಗಳನ್ನು ತಡೆಗಟ್ಟಲು ಅದಕ್ಕೆ ಪರಿಹಾರವನ್ನು ಕುಟುಂಬದ ಹಂತದಲ್ಲೇ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಮಾದಕ ದ್ರವ್ಯ ಸೇವನೆಯಿಂದ ದೈಹಿಕ ಮಾನಸಿಕ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇಂತಹ ಅಭ್ಯಾಸ ಇರುವವರು ಇದರಿಂದ ದೂರ ಇರುವ ಪ್ರತಿಜ್ಞೆ ಇಂದೇ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡುವುದು ಕಂಡು ಬರುತ್ತಿದೆ. ಇದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂತಹ ದುಶ್ಚಟಗಳಿಗೆ ಯುವಕರು ಬಲಿಯಾಗದೆ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಸಾರ್ಥಕತೆಯನ್ನು ತೋರಿಸಬೇಕಾಗಿದೆ. ಯಾರೂ ಕೂಡ ಇಂತಹ ದುರಭ್ಯಾಸಗಳಿಗೆ ಬಲಿಯಾಗದೆ ಒಳ್ಳೆಯ ಭವಿಷ್ಯವನ್ನು ರೂಢಿಸಿಕೊಳ್ಳುವಂತೆ ಮನವಿ ಮಾಡಿದರು.ಜಿಲ್ಲಾ ಆರೋಗ್ಯಾಧಿಕಾರಿ ಬಿ.ಎನ್. ಶಿವಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಸಿ.ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ವಿಜಯ ಗೊರೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ನಾಗೇಶ್ ಆರಾಧ್ಯ, ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ. ಜಿ.ಎಸ್.ನಾಗಪ್ಪ ಇತರರು ಹಾಜರಿದ್ದರು.