28ರಿಂದ ಜಿಲ್ಲೆಯ ಶಾಲೆಗಳಲ್ಲಿ ಹಸಿರು ದೀಪಾವಳಿ ಆಚರಣೆ ಕುರಿತ ಜಾಗೃತಿ ಅಭಿಯಾನ

KannadaprabhaNewsNetwork |  
Published : Oct 28, 2024, 01:02 AM IST
ಅಭಿಯಾನ | Kannada Prabha

ಸಾರಾಂಶ

ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತಾದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 28ರಿಂದ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬೆಳಕಿನ‌ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅ.28 ರಿಂದ 30 ರ ವರೆಗೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ‘ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ’: ನಮ್ಮ ನಡೆ ಹಸಿರೆಡೆಗೆ ಗೋ ಗ್ರೀನ್ ಅಭಿಯಾನ : 2024 ದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತ ಜಾಗೃತಿ ಅಭಿಯಾನ 2024 ಅನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಶಾಲಾ ಶಿಕ್ಷಣ ಇಲಾಖೆ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಎನ್.ಎಸ್.ಎಸ್.ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ.

ಶಾಲಾ - ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಮಾಲಿನ್ಯಮುಕ್ತ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಬಗ್ಗೆ ಜನಜಾಗೃತಿ ಮೂಡಿಸಲು ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಎಂ.ಜಿ.ರಘುರಾಮ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಬ್ಬಕ್ಕೆ ಮಾಲಿನ್ಯ ಕಾರಕ ಪಟಾಕಿಗಳನ್ನು ನಿಷೇಧಿಸಿ, ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದು, ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಲಾಗಿದೆ. ಯಾರೂ ಕೂಡ ಮಾಲಿನ್ಯಕಾರಿ ಪಟಾಕಿಗಳನ್ನು ಸಿಡಿಸುವುದನ್ನು ನಿರ್ಬಂಧಿಸಲಾಗಿದ್ದು, ನಾಗರಿಕರು ಸರ್ಕಾರಿ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಸಿರು ದೀಪಾವಳಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳು ಈಗಾಗಲೇ ಹಸಿರು ದೀಪಾವಳಿ ಆಚರಣೆ ಕುರಿತು ನಾಗರಿಕರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ರಾಜ್ಯ ವಿಜ್ಞಾನ ಪರಿಷತ್ತು, ಎನ್ನೆಸ್ಸೆಸ್ ವತಿಯಿಂದ ಅ. 29 ರಂದು ( ಮಂಗಳವಾರ) ಬೆಳಗ್ಗೆ 9.30 ಗಂಟೆಗೆ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಮ್ನಾಟಿಕ್ಸ್‌ ಸಭಾಂಗಣದಲ್ಲಿ ಜಿಲ್ಲಾಮಟ್ಟದ‌ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ದೀಪಾವಳಿ ಅಂಗವಾಗಿ ನಡೆಯಲಿರುವ ದೀಪಾವಳಿ ಹಬ್ಬದ ಆಚರಣೆ ಕುರಿತು ಶಾಲಾ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಹಬ್ಬ ಆಚರಣೆ ಕುರಿತು ಶಿಕ್ಷಕರು‌ ಶಾಲಾ ಮಕ್ಕಳಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಆಡಳಿತ ) ಸಿ.ರಂಗಧಾಮಪ್ಪ ತಿಳಿಸಿದ್ದಾರೆ.

ದೀಪಾವಳಿ ಹಬ್ಬಕ್ಕೂ ಮುನ್ನ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನಾ ಅವಧಿಯಲ್ಲಿ

ಇಕೋ ಕ್ಲಬ್ ನ ಚಟುವಟಿಕೆಗಳ ಮೂಲಕ ಬೆಳಗ್ಗಿನ ಪ್ರಾರ್ಥನಾ ವೇಳೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ‌ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶಿಕ್ಷಣ ಇಲಾಖೆಯ ವತಿಯಿಂದ ನೀಡಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ 14 ವರ್ಷಗಳಿಂದ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ.

ಇದರಿಂದ ಜಿಲ್ಲೆಯಲ್ಲಿ ‌ಕ್ರಮೇಣ ಪಟಾಕಿ ಖರೀದಿ ಕ್ಷೀಣಿಸುತ್ತಾ ಬರುತ್ತಿದೆ ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜತೆಗೆ ಪ್ರಾಣಿ - ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ.‌ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರೇಮಕುಮಾರ್ ಮನವಿ ಮಾಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ