ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಅಭಿಯಾನ

KannadaprabhaNewsNetwork |  
Published : Oct 05, 2025, 01:00 AM IST
3ಕೆಎಂಎನ್ ಡಿ18 | Kannada Prabha

ಸಾರಾಂಶ

1931ರ ನಂತರ 94 ವರ್ಷಗಳ ಬಳಿಕ ನಡೆಸುತ್ತಿರುವ ಈ ಸಮೀಕ್ಷೆ ಹಿಂದುಳಿದ ವರ್ಗಗಳಿಗೆ ಮಹತ್ವದ್ದಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು, ವಿಶೇಷವಾಗಿ ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳಲು ಹಿಂದುಳಿದ ಸಮಾಜಗಳು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುವುದಕ್ಕಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಕಾರ್ಯಕರ್ತರು ಜಾಗೃತಿ ಅಭಿಯಾನ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಯಕರ್ತರು, ಸಮೀಕ್ಷೆಯ ಮಹತ್ವವವನ್ನು ಒಳಗೊಂಡಿರುವ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿ, ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.

ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, 1931ರ ನಂತರ 94 ವರ್ಷಗಳ ಬಳಿಕ ನಡೆಸುತ್ತಿರುವ ಈ ಸಮೀಕ್ಷೆ ಹಿಂದುಳಿದ ವರ್ಗಗಳಿಗೆ ಮಹತ್ವದ್ದಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು, ವಿಶೇಷವಾಗಿ ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳಲು ಹಿಂದುಳಿದ ಸಮಾಜಗಳು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿದ್ದರೂ, ಹಿಂದುಳಿದ ಸಮಾಜಗಳು ಸಂಘಟಿತವಾಗಿ ಒಗ್ಗೂಡಲು ಸಾಧ್ಯವಾಗಿಲ್ಲ. ಸಾಮಾಜಿಕವಾಗಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಾ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಅಗತ್ಯತೆ ಇದೆ. ಆದ್ದರಿಂದ ಕುಲಕಸುಬು ಅವಲಂಬಿತ ಹಿಂದುಳಿದ ಸಮುದಾಯಗಳು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಗಣತಿದಾರರ ಬಳಿ ವಾಸ್ತವಾಂಶಗಳನ್ನು ಧೈರ್ಯಯವಾಗಿ ವಿವರಿಸಬೇಕು. ಜೊತೆಗೆ ತಮ್ಮ ತಮ್ಮ ಸಮುದಾಯವನ್ನು ಹೇಳಿಕೊಳ್ಳಬೇಕು ಎಂದು ಹೇಳಿದರು.

ಮೀಸಲಾತಿ ಹೇರಿಕೆ ಸೇರಿದಂತೆ ಹಲವು ಅನುಕೂಲತೆಗಳನ್ನು ಕಲ್ಪಿಸುವ ಉದ್ದೇಶವನ್ನು ಒಳಗೊಂಡಿರುವ ಈ ಸಮೀಕ್ಷೆಯಿಂದ ಹಿಂದುಳಿದ ವರ್ಗಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಪ್ರತಿ ಸಣ್ಣ ಸಣ್ಣ ಸಮುದಾಯಗಳು ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮತ್ತು ಭವಿಷ್ಯದಲ್ಲಿ ಜನಸಂಖ್ಯೆಗನುಗುಣವಾಗಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್‍ಯವಾಗಿದೆ ಎಂದು ಪ್ರತಿಪಾದಿಸಿದರು.

ಸಮೀಕ್ಷೆಯ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದು ಹಿಂದುಳಿದ ವರ್ಗಗಳ ವಿರೋಧಿ ನಡೆಯಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ವರ್ಗಗಳನ್ನು ಎದುರುಹಾಕಿಕೊಂಡರೆ ಯಾವುದೇ ರಾಜಕೀಯ ಪಕ್ಷಕ್ಕೂ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರಾದ ಎಂ.ಕೃಷ್ಣ, ಡಿ. ರಮೇಶ್, ವೈರಮುಡಿ, ಜಯರಾಮ್, ಸಂತೆಕಸಲಗೆರೆ ಬಸವರಾಜು, ಕರವೇ ಅಶೋಕ್, ಸಿ. ಸಿದ್ದಶೆಟ್ಟಿ, ಮನೋಜ್‌ನಾಯಕ್, ಹುರುಗಲವಾಡಿ ರಾಮಯ್ಯ, ಶೇಷಗಿರಿರಾವ್, ಕಾಂತರಾಜು, ಎಚ್.ಪಿ. ಸತೀಶ್, ಮಂಚಶೆಟ್ಟಿ, ಪುಟ್ಟಸ್ವಾಮಿ, ಪರಮೇಶ್, ರಾಜೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’