ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ । ವೈರಿಗಳ ತಲೆ ತೆಗೆಯಬೇಡಿ, ನಿಮ್ಮ ತಲೆಯಿಂದ ವೈರಿಗಳನ್ನು ತೆಗೆಯಿರಿ । ಜೀವನ ಇದ್ದಂತೆ ಸ್ವೀಕರಿಸುವವನು ಸಂತ, ಜ್ಞಾನಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮನುಷ್ಯನಿಗೆ ಜೀವನದಲ್ಲಿ ಅರಿವು ಮುಖ್ಯ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ನಗರದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಗರ್ಭದಿಂದ ಭೂಮಿಗೆ ಬರುವ ಮಗು, ಅಳುತ್ತಾ ಬರುತ್ತದೆ. ಇಷ್ಟು ಜನ ನಾವು ಹುಟ್ಟಿ ಬಂದಿದ್ದೇವೆ. ಮಕ್ಕಳು ಹುಟ್ಟಿ ಬರುವುದನ್ನು ನೋಡಿದ್ದೇವೆ. ಯಾಕೆ ಆ ಮಗು ಅಳುತ್ತದೆ. ಏನು ಪಡೆಯಬೇಕು ಎಂಬುದಕ್ಕೆ ಅಳುತ್ತದೆ. ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾನೆ. ಭೂಮಿಗೆ ಬರುವ ಮಗು, ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾರೆ, ಏಕೆ? ಏನು ಪಡೆಯಬೇಕು ಎಂದು ಮಗು ಅಳುತ್ತದೆ, ಏನು ಕಳೆದುಕೊಂಡಿದ್ದೇನೆ ಎಂದು ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾನೆ. ಅದು ಏನೆಂದರೆ ಸಂತೋಷ. ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಬಯಸುವ ಗುರಿ ದುಃಖ ಇರಬಾರದು. ಸಂತೋಷದಿಂದ ಇರಬೇಕು ಎಂಬುದು ಇಚ್ಚೆ. ಉಣ್ಣಲಿಕ್ಕೆ ಅನ್ನ, ಆಶ್ರಯ, ಬಟ್ಟೆ ಬೇಕು. ಇವುಗಳ ಜೊತೆ ಹೇಗೆ ಬದುಕಬೇಕು ಎಂಬ ಅರಿವು ಬೇಕು. ಅಂದಾಗ ಸಂತೋಷದಿಂದ ಬಾಳಲು ಸಾದ್ಯ.
ಮನುಷ್ಯನಿಗೆ ಜೀವನದಲ್ಲಿ ಬೇಕಾಗಿರುವುದು ಅರಿವು. ಅರಿವು ಇಲ್ಲದಿದ್ದರೆ ಬದುಕು ಕೆಡುತ್ತದೆ. ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಮಾಡುವ ಕೆಲಸ ಕಲಿಯುವುದು ಆಗಿದೆ. ಪ್ರತಿ ಕ್ಷಣ ಇಲ್ಲಿ ಹೊಸದನ್ನು ಕಲಿಯುವುದು ಇದೆ. ಪ್ರತಿ ಕ್ಷಣ ಬದುಕು ಪಾಠ ಕಲಿಸುತ್ತದೆ. ಎಂದರು.ಮಂದಿ ನಂಬಿ ಕೆಟ್ಟವರಿದ್ದಾರೆ. ಮಣ್ಣು ನಂಬಿ ಕೆಟ್ಟವರಿಲ್ಲ ಎಂದು ತಂದೆ ಹೇಳುತ್ತಾರೆ. ಇದರರ್ಥ ದುಡಿಯಬೇಕು ಎಂದು. ಕುಕ್ಕರ್ ತೆಳಗೆ ಬೆಂಕಿ ಇಟ್ಟರೆ ಸಿಟಿ ಹೊಡೆಯುತ್ತದೆ. ಹಾಗೆ ನಮಗೆ ಬೆಂಕಿ ಇಟ್ಟರೂ ಸಿಟಿ ಹೊಡೆಕ್ಕೊಂತಾ ಸಾಗಬೇಕು. ಜಗತ್ತು ಎಂದರೆ ಡೋನೆಷನ್ ಇಲ್ಲದ ಪಾಠ ಶಾಲೆ. ಇದು ಫೀಸ್ ಇಲ್ಲದೆ ಶಾಲೆ ಕಲಿಸುತ್ತದೆ. ಜೀವನ ಇದೊಂದು ಪಾಠ ಶಾಲೆ. ಬಡತನ, ನಿಂದನೆ, ವೈರಿಗಳ ಚುಚ್ಚು ಮಾತು ಜೀವನದಲ್ಲಿ ಬರುತ್ತದೆ. ಇವೆಲ್ಲವನ್ನು ಮೀರಿ ಬದುಕಬೇಕು. ದುಃಖದಲ್ಲಿದ್ದಾಗ ನಮ್ಮ ಕೈಯಲ್ಲಿನ ಒಂದು ಬೆರಳು ಮಾತ್ರ ಕಣ್ಣೀರು ಒರೆಸಲು ಬರುತ್ತದೆ. ಹತ್ತು ಬೆರಳು ಬರುವುದಿಲ್ಲ. ಹಾಗೆ ಬರುವ ಕಷ್ಟ ಅನುಭವಿಸಿ ಮೆಟ್ಟಿ ನಿಲ್ಲಬೇಕು. ಖಾಲಿ ಜೇಬು ಪಾಠ ಕಲಿಸುತ್ತದೆ. ಕಲಿಬೇಕು. ಹಸಿವು ಮತ್ತು ಬಡತನ ಪಾಠ ಕಲಿಸುತ್ತದೆ ಎಂದು ಹೇಳುತ್ತಾರೆ. ಪಾಠ ಕಲಿಯಬೇಕು. ವೈರಿಗಳ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ವೈರಿಗಳ ತಲೆ ತೆಗೆಯಬೇಡಿ, ನಿಮ್ಮ ತಲೆಯಿಂದ ವೈರಿಗಳನ್ನು ತೆಗೆಯಿರಿ, ಅವಾಗ ಅದುವೇ ಸಾರ್ಥಕ ಎಂದರು.