ಕನ್ನಡಪ್ರಭ ವಾರ್ತೆ ಬೇಲೂರು
ಮಾನವನ ದುರಾಸೆಯಿಂದ ಪರಿಸರ ವಿನಾಶದತ್ತ ಸಾಗಿದ್ದು, ಹವಾಗುಣ ವ್ಯತ್ಯಾಸದಿಂದ ಭೂಮಿಯ ತಾಪಮಾನ ಏರುಪೇರಾಗಿ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್. ರಾಜೇಗೌಡ ಹೇಳಿದರು.ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಿಪಿಆರ್, ಪರಿಸರ ಶಿಕ್ಷಣ ಕೇಂದ್ರ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಶಿಕ್ಷಕ ಶಿಬಿರಾರ್ಥಿಗಳಿಗೆ ಹಮ್ಮಿಕೊಂಡ ಪರಿಸರ ಶಿಕ್ಷಣ ಕಾರ್ಯಾಗಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ, ಪ್ರತಿ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂದಾಗಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಾವೆಲ್ಲರೂ ಬದುಕಬೇಕೆಂದರೆ ಮೊದಲು ಕಾಡನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಮನುಷ್ಯನ ಅತಿ ಆಸೆಗೆ ಕಾಡು ಬರಿದಾಗುತ್ತಿದೆ, ಕಾಡಿದ್ದ ಜಾಗದಲ್ಲಿ ಕಾಂಕ್ರೀಟ್ ಆಗುತ್ತಿದೆ, ಕಾಡು ಪ್ರಾಣಿಗಳು ಕೂಡ ಮನುಷ್ಯರಿರುವ ಕಡೆ ಆಹಾರ ಅರಸಿಕೊಂಡು ಬರುತ್ತಿವೆ. ಕಾಡಿದ್ದರೆ ಮಾತ್ರ ನಾವು ಎನ್ನುವುದನ್ನು ನಾವೆಲ್ಲ ಮರೆಯುತ್ತಿದ್ದೇವೆ. ಮುಂದಾಗುವ ಪರಿಸರದ ಅನಾಹುತಗಳನ್ನು ತಪ್ಪಿಸಿ ಮುಂದಿನ ಪೀಳಿಗೆಗೆ ನಾವೆಲ್ಲರೂ ಪರಿಸರ ಉಳಿಸುವತ್ತ ಜಾಗೃತರಾಗಬೇಕಾದ ಸಂದರ್ಭ ಈಗ ಬಂದಿದೆ. ಈ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮ ನಿರೂಪಿಸಿ, ಜಾಗೃತಿ ಮೂಡಿಸುತ್ತಿದ್ದು, ಅದರಲ್ಲೂ ಬಿಜಿಎಸ್ ಕಾರ್ಯ ಅಮೋಘ ವಾಗಿದ್ದು, ಈ ನಿಟ್ಟಿನಲ್ಲಿ ಅಧ್ಯಕ್ಷ ಎಚ್. ಆರ್. ಚಂದ್ರುರವರು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ಪ್ರಶಂಸಿದರು.ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಹಾಗೂ ವಕೀಲ ಎಚ್.ಆರ್. ಚಂದ್ರು ಮಾತನಾಡಿ, ಭಾರತ ಜ್ಞಾನ ವಿಜ್ಞಾನ ಸಮಿತಿಯು ಜನರಲ್ಲಿ ವೈಜ್ಞಾನಿಕ ಅರಿವನ್ನು ಮೂಡಿಸಿ, ಶಿಕ್ಷಣ ಮತ್ತು ಸಬಲೀಕರಣದ ಮೂಲಕ ಸಾಮಾಜಿಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೂಢನಂಬಿಕೆಗಳನ್ನು ಹೋಗಲಾಡಿಸುವಂಥ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅದರಲ್ಲೂ ಬಿಸಿ ಅಲೆ, ಅತಿ ಮಳೆ, ನೈರ್ಮಲ್ಯ ಮುಂತಾದ ವಿಷಯಗಳ ಬಗ್ಗೆ ಅರಿವು ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಕಲಿಸಲು ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ತರಬೇತಿ ನೀಡುತ್ತಿದ್ದೇವೆ ಎಂದರು.
ಅಹಮದ್ ಹಗರೆ, ಕೆ.ಎಸ್. ರವಿಕುಮಾರ್ ಹಾಸನ ಹಾಗೂ ತುಮಕೂರಿನ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಹಾಸನ ಜಿಲ್ಲಾ ಬಿಜಿವಿಎಸ್ ಅಧ್ಯಕ್ಷೆ ಸೌಭಾಗ್ಯ, ಕಾರ್ಯದರ್ಶಿ ಶೇಷಪ್ಪ ಹಾಜರಿದ್ದರು.