ವೈಜ್ಞಾನಿಕ ಯೂರಿಯಾ ಬಳಕೆಗೆ ಜಾಗೃತಿ ಅಗತ್ಯ: ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಫೂರ್ತಿ

KannadaprabhaNewsNetwork |  
Published : Apr 13, 2026, 01:45 AM IST
ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿದರು. | Kannada Prabha

ಸಾರಾಂಶ

ಯೂರಿಯಾ ಗೊಬ್ಬರವು ಒಂದು ವಿಷಯುಕ್ತ ರಾಸಾಯನಿಕವಾಗಿದೆ. ರೈತರು ಅದನ್ನು ನಿಗದಿತ ಪ್ರಮಾಣದಲ್ಲಿ ಬಳಸಬೇಕಿದ್ದು, ಯೂರಿಯಾ ಹೆಚ್ಚಾಗಿ ಬಳಸಿದರೆ ಮಣ್ಣು ಹಾಗೂ ನೀರಿನ ಗುಣಮಟ್ಟಕ್ಕೆ ಹಾನಿಯಾಗುತ್ತದೆ.

ಶಿರಹಟ್ಟಿ: ಅವೈಜ್ಞಾನಿಕವಾಗಿ ಯೂರಿಯಾ ರಸಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಅನಗತ್ಯವಾಗಿ ಯೂರಿಯಾ ಬಳಸದೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ತಿಳಿಸಿದರು.ಸ್ಥಳೀಯ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಯೂರಿಯಾ ವಿತರಣಾ ತಂತ್ರಾಂಶದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯೂರಿಯಾ ಗೊಬ್ಬರವು ಒಂದು ವಿಷಯುಕ್ತ ರಾಸಾಯನಿಕವಾಗಿದೆ. ರೈತರು ಅದನ್ನು ನಿಗದಿತ ಪ್ರಮಾಣದಲ್ಲಿ ಬಳಸಬೇಕಿದ್ದು, ಯೂರಿಯಾ ಹೆಚ್ಚಾಗಿ ಬಳಸಿದರೆ ಮಣ್ಣು ಹಾಗೂ ನೀರಿನ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂದರು.

ಪಂಜಾಬನಲ್ಲಿ ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಗರ್ಭಜಲದಲ್ಲಿ ಯೂರಿಯಾ ಅಂಶ ಹೆಚ್ಚಾಗಿ ಸೇರಿದ್ದು, ಅದರ ಪರಿಣಾಮವಾಗಿ ಕ್ಯಾನ್ಸರ್ ರೋಗ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಈ ರೀತಿಯ ಸಮಸ್ಯೆಗಳು ನಮ್ಮ ರಾಜ್ಯದಲ್ಲಿ ಉಂಟಾಗದಂತೆ ತಡೆಯಲು ಪ್ರತಿಯೊಬ್ಬ ರಸಗೊಬ್ಬರ ವಿತರಕರು ತಾಲೂಕಿನ ರೈತರಿಗೆ ಯೂರಿಯಾ ಬಳಕೆಯ ಕುರಿತು ಸರಿಯಾದ ಮಾಹಿತಿ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದರು.ಜಿಲ್ಲೆಯಲ್ಲಿ ಈಗಾಗಲೇ ಯೂರಿಯಾ ಗೊಬ್ಬರದ ಮಾರಾಟ ಹೆಚ್ಚಾಗುತ್ತಿದ್ದು, ಬಿತ್ತನೆ ಸಮಯವಲ್ಲದಿದ್ದರೂ ಯೂರಿಯಾ ಬಳಕೆ ಹೆಚ್ಚಾಗಿ ನಡೆಯುತ್ತಿದೆ. 2025ರ ಮಾರ್ಚ್ ತಿಂಗಳಲ್ಲಿ ಸುಮಾರು 2000 ಟನ್ ಯೂರಿಯಾ ಬಳಕೆಯಾಗಿದ್ದು, ಮುಂದಿನ ವರ್ಷದಲ್ಲಿ ಅದು ಸುಮಾರು 28,000 ಟನ್‌ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಡೀಲರ್‌ಗಳು ಅನಾವಶ್ಯಕವಾಗಿ ರಸಗೊಬ್ಬರವನ್ನು ಸಂಗ್ರಹಿಸಿಟ್ಟುಕೊಳ್ಳದೇ ಬೇಡಿಕೆಗನುಗುಣವಾಗಿ ಅಗತ್ಯವಿದ್ದಷ್ಟನ್ನು ಮಾತ್ರ ಖರೀದಿ ಮಾಡಿ ಮಾರಾಟ ಮಾಡಬೇಕು. ನಿರ್ಗಾಣಿ ಸಮಿತಿಯ ಸಲಹೆ ಸೂಚನೆಗಳಂತೆ ಗೊಬ್ಬರ ಮಾರಾಟ ನಡೆಯಬೇಕು ಹಾಗೂ ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತಾಲೂಕಿನ ರಸಗೊಬ್ಬರವನ್ನು ಇತರೆ ಜಿಲ್ಲೆಗಳಿಗೆ ವಿತರಣೆ ಮಾಡುತ್ತಿರುವುದು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಯೂರಿಯಾ ವಿತರಣಾ ತಂತ್ರಾಂಶದ ಆ್ಯಪನ್ನು ತಹಸೀಲ್ದಾರ್ ರಾಘವೇಂದ್ರ ರಾವ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಪರಿಕರ ವಿತರಣಾ ಸಂಘದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಅಶೋಕ್ ಬಟಗುರ್ಕಿ, ಶಿರಹಟ್ಟಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಲಕ್ಷ್ಮೇಶ್ವರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನರಸಮ್ಮನವರ, ರಮೇಶ್ ಲಮಾಣಿ, ಯಲ್ಲಪ್ಪ ಬಂಗಾರಿ, ನಿಂಗಪ್ಪ ಭಜನಿ, ವೀರೇಶ್ ಉಪ್ಪಾರ ಸೇರಿದಂತೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ರಸಗೊಬ್ಬರ ವಿತರಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರದಕ್ಷಿಣೆ ಕಿರುಕುಳ ಆರೋಪ, ಮಹಿಳೆ ಆತ್ಮಹತ್ಯೆ
ಮಹಿಳಾ ಮೀಸಲಾತಿ ಮಸೂದೆ ಕುರಿತು ಇಂದಿನಿಂದ ಜಾಗೃತಿ