ಕುಷ್ಟಗಿ: ಅಪರಾಧ ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಕುಷ್ಟಗಿ ಪೊಲೀಸ ಠಾಣೆಯ ಪಿಎಸೈ ಹನುಮಂತಪ್ಪ ತಳವಾರ ಹೇಳಿದರು.
ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಜಾಗೃತೆಯಿಂದ ಇರಬೇಕು, ಅಂತಹ ಘಟನೆಗಳು ಕಂಡು ಬಂದಲ್ಲಿ ಸಹಾಯವಾಣಿ 112 ನಂಬರಿಗೆ ಕರೆ ಮಾಡಬೇಕು ಎಂದು ತಿಳಿಸಿದ ಅವರು, ಗ್ರಾಮದಲ್ಲಿ ಎಲ್ಲರೂ ಸಹೋದರತ್ವ ಭಾವನೆಯಿಂದ ಜೀವನ ಮಾಡಬೇಕು ಅಸ್ಪೃಶ್ಯತೆ ಆಚರಣೆ ಮಾಡಬಾರದು ಎಂದು ತಿಳಿಸಿದರು.ವಸತಿ ನಿಲಯಕ್ಕೆ ಭೇಟಿ: ದೋಟಿಹಾಳದಲ್ಲಿನ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಪಿಎಸೈ ಹನುಮಂತಪ್ಪ ತಳವಾರ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳು ಉತ್ತಮ ವ್ಯಾಸಾಂಗ ಮಾಡಬೇಕು ದುಶ್ಚಟಗಳಿಗೆ ಬಲಿಯಾಗಬೇಡಿ ಜೀವನ ಹಾಳು ಮಾಡಿಕೊಳ್ಳಬೇಡಿ ಶೈಕ್ಷಣಿಕವಂತರಾಗಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದ ಅವರು, ಅಪರಾಧ ತಡೆ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಕರಿಯಪ್ಪ ಪೂಜಾರ, ಹನುಮಂತರಾವ ದೇಸಾಯಿ, ಸುರೇಶ ಹುನಗುಂದ, ಶಂಕರಪ್ಪ ಗೌಂಡಿ, ಗೂಡುಸಾಬ್ ಕೊಳ್ಳಿ ಸೇರಿದಂತೆ ವಸತಿ ನಿಲಯದ ಸಿಬ್ಬಂದಿಗಳು, ಗ್ರಾಮದ ಗಣ್ಯರು, ಗ್ರಾಮಸ್ಥರು ಹಾಗೂ ಪೊಲೀಸ ಇಲಾಖೆಯ ಸಿಬ್ಬಂದಿಗಳು ಇದ್ದರು.