ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

KannadaprabhaNewsNetwork |  
Published : Jun 14, 2025, 02:14 AM IST
ಫೋಟೋ 13 ಟಿಟಿಎಚ್ 01: ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅನಿಕೇತನ್ ವಿವರಣೆ ನೀಡಿದರು. | Kannada Prabha

ಸಾರಾಂಶ

ಡೆಂಘೀ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ನೆರವಿನಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಡೆಂಘೀ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ನೆರವಿನಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿಯ ಗ್ರಾಮೀಣಸೌಧದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ಮೇಲಿನ ಚರ್ಚೆಯಲ್ಲಿ, ಡೆಂಘೀ ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ಸಂಪೂರ್ಣ ತಡೆಗಟ್ಟುವುದು ಅಗತ್ಯವಿದೆ. ಡೆಂಘೀಯಿಂದಾಗಿ ರಾಜ್ಯದಲ್ಲಿಯೇ ಮೊದಲ ಸಾವು ತಾಲೂಕಿನಲ್ಲಿ ಈ ವರ್ಷದ ಆರಂಭದಲ್ಲಿಯೇ ಸಂಭವಿಸಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಬಗ್ಗೆ ವ್ಯಾಪಕವಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಬೇಕಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತನ್ ವಿವರಣೆ ನೀಡಿ, ಈ ಬಾರಿ ಕೆಎಫ್‍ಡಿ ನಿಯಂತ್ರಣದಲ್ಲಿದ್ದು, 64 ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ 5 ಮಂದಿ ಡೆಂಘೀಯಿಂದ ನರಳುತ್ತಿದ್ದಾರೆ. ಹೊರಗಿನಿಂದ ಬಂದವರಲ್ಲಿ ಮಲೇರಿಯಾ ಕಾಣಿಸಿಕೊಂಡಿದೆ. ಮೇಲಿನಕುರುವಳ್ಳಿ ಹಾಗೂ ಆಗುಂಬೆ ಭಾಗದ ಕೆಲವು ವ್ಯಕ್ತಿಗಳಿಗೆ ಕ್ಷಯರೋಗ ಇರುವುದು ದೃಢಪಟ್ಟಿದೆ ಎಂದು ತಿಳಿಸಿದರು.

ನಾಮ ನಿರ್ದೇಶಿತ ಸದಸ್ಯೆ ಜೀನಾ ವಿಕ್ಟರ್ ಮಾತನಾಡಿ, ಪಟ್ಟಣದ ಬಹುತೇಕ ಹೋಟೆಲ್‌ಗಳಲ್ಲಿ ಸ್ವಚ್ಛತೆಯೇ ಇಲ್ಲವಾಗಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕುರ್ಚಿ ಟೇಬಲ್‍ಗಳ ಮೇಲೆ ಫೊಂಗಸ್ ಇದೆ. ಅಡುಗೆ ಮನೆಗಳ ಸ್ಥಿತಿಯಂತೂ ಶೋಚನೀಯವಾಗಿದ್ದು ಈ ಬಗ್ಗೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಗಳೂ ಗಮನ ಹರಿಸದಿರುವುದು ಆತಂಕದ ಸಂಗತಿಯಾಗಿದೆ ಎಂದರು.

ಈ ಬಗ್ಗೆ ದನಿಗೂಡಿಸಿದ ಶಾಸಕ ಆರಗ ಜ್ಞಾನೇಂದ್ರ, ಹೋಟೆಲ್ ಕ್ಲೀನರ್‌ಗಳ ಕೈಗಳನ್ನು ನೋಡುವಂತಿಲ್ಲಾ. ಮನುಷ್ಯರು ತಿನ್ನುವ ಆಹಾರವನ್ನು ಸ್ವಚ್ಛವಾಗಿಡಬೇಕೆಂಬ ಕನಿಷ್ಠ ಜ್ಞಾನ ಹೋಟೆಲ್ ಮತ್ತು ಮೀನು ಮಾಂಸದ ಅಂಗಡಿಗಳ ಮಾಲೀಕರಿಗಿರಬೇಕು. ಸ್ವಚ್ಛತೆ ಬಗ್ಗೆ ಪಪಂ ಕಡ್ಡಾಯವಾಗಿ ಬಿಗಿಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಓ ಎಂ.ಶೈಲಾ, ವೈಧ್ಯಾಧಿಕಾರಿ ಡಾ. ಗಣೇಶ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ನಾಮ ನಿರ್ದೆಶಿತ ಸದಸ್ಯರಾದ ಮಹೇಶ್ ಗೌಡ, ಕೆಳಕೆರೆ ಪೂರ್ಣೇಶ್, ಕರುಣಾಕರ, ಸಹಕಾರಿ ಮುಖಂಡರಾದ ಎಚ್.ಎನ್.ವಿಜಯದೇವ್ ಹಾಗೂ ಕೆ.ನಾಗರಾಜ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ