ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮದಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗುರುಸ್ವಾಮಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹನೂರು
ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಬಹುಮುಖ್ಯ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗುರುಸ್ವಾಮಿ ತಿಳಿಸಿದರು.ತಾಲೂಕಿನ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಲ್ಯವಿವಾಹ ನಿಷೇಧ ಕಾಯ್ದೆ, ರಸ್ತೆ ಸಂಚಾರ ನಿಯಮ ಮತ್ತು ಪೋಕ್ಸೋ ಕಾಯ್ದೆಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ಪ್ರತಿಯೊಬ್ಬ ಮಕ್ಕಳು ತಿಳಿದುಕೊಂಡಿರಬೇಕು ಎಂದರು. ವಿದ್ಯಾರ್ಥಿಗಳು ಪೊಲೀಸ್ ಠಾಣೆ ಎಂದರೆ ಭಯಪಡದೆ ಧೈರ್ಯವಾಗಿ ಯಾವುದೇ ಅಳುಕಿಲ್ಲದೆ ಬರಬೇಕು. ಜೊತೆಗೆ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಭಾಗಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಕ್ಕಳು ತಿಳಿದುಕೊಂಡಿರಬೇಕು ಎಂದರು.
ಪ್ರಕರಣಗಳು ಕಂಡು ಬಂದರೆ ಇಆರ್‌ಎಸ್‌ಎಸ್ 112 ಹಾಗೂ ಮಕ್ಕಳ ಸಹಾಯವಾಣಿ 1098 ನಂಬರಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದರೆ ಅಂತಹ ಮಕ್ಕಳ ವಿಳಾಸ ಮತ್ತು ಹೆಸರನ್ನು ಗುಪ್ತವಾಗಿ ಇಡಲಾಗುವುದು. ಜೊತೆಗೆ ಶಾಲೆಗಳಲ್ಲಿರುವ ಆಪ್ತ ಗಳತಿ ದೂರ ಪೆಟ್ಟಿಗೆಯಲ್ಲಿ ವಿದ್ಯಾರ್ಥಿಗಳು ಮಾಹಿತಿಯನ್ನು ನೀಡಬಹುದು. ಪೊಲೀಸ್ ಇಲಾಖೆ ವತಿಯಿಂದ ಆಯೋಜನೆ ಮಾಡಿರುವ ತೆರೆದ ಮನೆ ಕಾರ್ಯಕ್ರಮವನ್ನು ಮಕ್ಕಳು ಸದ್ಬಳಕೆ ಮಾಡಿ ಕೊಡಬೇಕು ಎಂದರು.
ಅಪ್ರಾಪ್ತ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿದರೆ ದಂಡ ತಪ್ಪಿದ್ದಲ್ಲ, ಹೀಗಾಗಿ ಪ್ರತಿಯೊಬ್ಬ ತಂದೆ ತಾಯಿಗಳು ಸಹ ಮಕ್ಕಳಿಗೆ ವಾಹನ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು. ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಧೈರ್ಯವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.