ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ

KannadaprabhaNewsNetwork |  
Published : Jun 14, 2025, 02:07 AM ISTUpdated : Jun 14, 2025, 02:08 AM IST
11ಎಂಡಿಕೆ2 :  ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ ಉದ್ಘಾಟನೆ.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 29ನೇ ವಾರ್ಷಿಕ ಮಹಾಸಭೆ ಸಮಾಜ ಬಾಂಧವರಿಗಾಗಿ ಆಟೋಟ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ 29ನೇ ವಾರ್ಷಿಕ ಮಹಾಸಭೆ, ಸಮಾಜ ಬಾಂಧವರಿಗಾಗಿ ಆಟೋಟ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಮಡಿಕೇರಿ ಸಮೀಪದ ತಾಳತ್ತಮನೆ ಗ್ರಾಮದಲ್ಲಿರುವ ಸಂಘದ ನಿವೇಶನದ ಆವರಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು ಸಮಾಜ ಬಾಂಧವರ ಪ್ರಗತಿಗೆ ಮತ್ತು ಸಾಮಾಜಿಕ ಚಟುವಟಿಕೆಗಳಿಗೆಗಾಗಿ ಸಂಘಕ್ಕೆ ಐದು ಎಕರೆ ಭೂಮಿ ಪಡೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಸಮಾಜದ ಅಭ್ಯುದಯಕ್ಕೆ ಸಹಕಾರ ನೀಡಬೇಕು:

ಸಮುದಾಯದ ಮಂದಿಯ ಆರೋಗ್ಯ ಸುಧಾರಣೆಗೆ ಆರೋಗ್ಯ ನಿಧಿ ಸಂಗ್ರಹಿಸಿ ಪ್ರತ್ಯೇಕ ಖಾತೆ ತೆರೆಯಬೇಕು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ ಮರಾಠ ಮರಾಟಿ ವಿದ್ಯಾಭಿವೃದ್ಧಿ ನಿಧಿ ಖಾತೆಯನ್ನು ಆರಂಭಿಸಬೇಕು, ಸರ್ಕಾರದ ಸಮಿತಿಗಳ ಸಭೆಯಲ್ಲಿ ಸಂಘವನ್ನು ಪ್ರತಿನಿಧಿಸಲು ಸಮಾಜ ಬಾಂಧವರು ಮುಂದೆ ಬರಬೇಕು, ಸರ್ವರು ಸಂಘದ ಅಜೀವ ಸದಸ್ಯತ್ವವನ್ನು ಪಡೆದು ಸಮಾಜದ ಅಭ್ಯುದಯಕ್ಕೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಐಎಫ್‌ಎಸ್ ಅಧಿಕಾರಿ ಸುಂದರ ನಾಯ್ಕ್ ಅವರು, ಸಂಘದ ಏಳಿಗೆಗೆ ಹಾಗೂ ಸಂಘದ ಆಡಳಿತ ಮಂಡಳಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಮರಾಟಿ ಒಕ್ಕೂಟದ ಕುರಿತು ಸಭೆಗೆ ಮಾಹಿತಿ ನೀಡಿದ ಅವರು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲು ಐವರು ಪ್ರತಿನಿಧಿಗಳು ಸಹಕರಿಸಬೇಕೆಂದು ತಿಳಿಸಿದರು.

50 ಸಾವಿರ ರು. ದೇಣಿಗೆಯನ್ನು ಘೋಷಣೆ

ಸಂಘದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸುವುದಾಗಿ ಭರವಸೆ ನೀಡಿದ ಅವರು, ಕಟ್ಟಡ ಕಾಮಗಾರಿ ಮುಂದುವರಿಸಲು ವೈಯುಕ್ತಿಕವಾಗಿ 50 ಸಾವಿರ ರು. ದೇಣಿಗೆಯನ್ನು ಘೋಷಿಸಿದರು.

ಸಮಾಜದ ಹಿರಿಯರಾದ ದೇವಿ ಪ್ರಸಾದ್ ವಾಮನ ನಾಯ್ಕ್ ಅವರು ಮಾತನಾಡಿ ಸಮಾಜ ಬಾಂಧವರು ಸಮಾಜದ ಏಳಿಗೆಗೆ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕೆಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಘದ ಹಿರಿಯ ಅಜೀವ ಸದಸ್ಯರು ಹಾಗೂ ಜಿ.ಪಂ ಮಾಜಿ ಸದಸ್ಯ ಎಂ.ಟಿ.ನಾರಾಯಣ ಅವರು ಸಂಘದ ಆಡಳಿತ ಮಂಡಳಿಗೆ ನಿವೇಶನವನ್ನು ಪಡೆಯುವಲ್ಲಿ ಸಂಘದ ಹಿರಿಯ ಸದಸ್ಯರು ಪಟ್ಟ ಶ್ರಮವನ್ನು ಸ್ಮರಿಸಿದರು.

ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು ಮತ್ತು ಸದಸ್ಯತ್ವ ಶುಲ್ಕವನ್ನು ಹೆಚ್ಚಿಸಿ ಹಣವನ್ನು ಕ್ರೋಢೀಕರಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ದೊಡ್ಡತ್ತೂರು, ಉಪಾಧ್ಯಕ್ಷರಾದ ದೇವಕಿ ಜಿ.ಆರ್ ನಾಯಕ್, ಯುವ ವೇದಿಕೆ ಅಧ್ಯಕ್ಷ ಮೋಹನ ಎಂ.ಆರ್ ಕಾನೂರು, ಮಹಿಳಾ ವೇದಿಕೆ ಅಧ್ಯಕ್ಷರಾದ ರತ್ನಮಂಜರಿ ಎಂ.ಆರ್, ಕಟ್ಟಡ ಸಮಿತಿ ಅಧ್ಯಕ್ಷ ಗುರುವಪ್ಪ ಎಂ.ಟಿ ಚಿಕ್ಕತ್ತೂರು, ಉಪ ಸಮಿತಿ ಅಧ್ಯಕ್ಷರಾದ ವೆಂಕಪ್ಪ ಎಂ.ಎಸ್ 2ನೇ ಮೊಣ್ಣಂಗೇರಿ, ಧನಂಜಯ ಕುಮಾರ್, ಕುಂಡಾಡು ಹೊನ್ನಪ್ಪ ಎಚ್.ಕೆ ಕರಿಕೆ ಹಾಗೂ ನಿರಲ್ ಕುಮಾರ್ ಕಾನೂರು ಉಪಸ್ಥಿತರಿದ್ದರು.

2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಹೊನ್ನಮ್ಮ ಹಾಗೂ ಲೆಕ್ಕಪತ್ರವನ್ನು ಮೋಹನ್ ಎಂ.ಆರ್ ಮಂಡಿಸಿದರು. ಭಾರತಿ ರಾಮಣ್ಣ ಪ್ರಾರ್ಥಿಸಿ, ನರಸಿಂಹ ಎ.ಎಂ ಸ್ವಾಗತಿಸಿ, ರತ್ನಮಂಜರಿ ನರಸಿಂಹ ವಂದಿಸಿದರು.

ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹ

2023-24 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 7ನೇ ತರಗತಿ, 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿವಿಧ ಆಟೋಟ ಸ್ಪರ್ಧೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 29ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಕಿಡಿಪ್ ನ್ನು ಇದೇ ಸಂದರ್ಭ ಡ್ರಾ ಮಾಡಲಾಯಿತು.

*ನೂತನ ಪದಾಧಿಕಾರಿಗಳ ಆಯ್ಕೆ*

ಸಭೆಯಲ್ಲಿ 2025-26ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ ಕೆದಮಳ್ಳೂರು, ಯುವ ವೇದಿಕೆ ಅಧ್ಯಕ್ಷರಾಗಿ ಮೋಹನ ಎಂ.ಆರ್ ಕಾನೂರು ಹಾಗೂ ಮಹಿಳಾ ವೇದಿಕೆ ಅಧ್ಯಕ್ಷರಾಗಿ ರತ್ನಮಂಜರಿ ನರಸಿಂಹ ತಾಳತ್ತಮನೆ ಅವರು ಅವಿರೋಧವಾಗಿ ಮರು ಆಯ್ಕೆಯಾದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ