ತಿಮ್ಮಲಾಪುರದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ, ಕಡೂರುಸರ್ಕಾರಿ ವಸತಿ ಶಾಲೆಗಳ ಮಕ್ಕಳು ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಪಡೆದು ಮಾಡಿದ ಸಾಧನೆ ನೋಡಿ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಬದುಕು ಹಸನಾಗಲು ಕ್ಷೇತ್ರದಲ್ಲಿ ವಸತಿ ಶಾಲೆಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಬುಧವಾರ ಕಡೂರು ತಾಲೂಕು ಪಂಚನಹಳ್ಳಿ ಹೋಬಳಿ ತಿಮ್ಮಲಾಪುರದಲ್ಲಿ ₹22 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮೊರಾರ್ಜಿ ವಸತಿ ಶಾಲೆಗಳು, ಅಲ್ಪ ಸಂಖ್ಯಾತರ ವಸತಿ ಶಾಲೆ, ಕಾರ್ಮಿಕರ ಮಕ್ಕಳ ವಸತಿ ಶಾಲೆ, ಅಲೆಮಾರಿ ಮಕ್ಕಳ ವಸತಿ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳೂ ಸೇರಿ ಶಿಕ್ಷಣ ಬಲಪಡಿಸಲು ₹150 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ. ಬಹುಶಃ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕ್ಷೇತ್ರಕ್ಕೂ ಇಷ್ಟು ಹಣ ಮಂಜೂರಾಗಿರಲಾರದು ಎಂದರು.
ಇಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ನೀಡಿದ ತಿಮ್ಮಲಾಪುರ ಗ್ರಾಮಸ್ಥರ ಸಹಕಾರ ನಿಜಕ್ಕೂ ಶ್ಲಾಘನೀಯ. ಉಳುಮೆ ಮಾಡುತ್ತಿದ್ದ ಗೋಮಾಳ ಭೂಮಿ ಸರ್ಕಾರಿ ಯೋಜನೆಗಳಿಗೆ ನೀಡಿ ಉದಾರತೆ ಮೆರೆದಿದ್ದೀರಿ. ಈ ಭಾಗದ ಬಹುದಿನಗಳ ಬೇಡಿಕೆಯಾದ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಪ್ರಶ್ನೆ ಕೇಳಿದ್ದು, ಈ ವಿಷಯ ಸದನದಲ್ಲಿ ಪ್ರಸ್ತಾಪಿಸಿ ನಿವೇಶನ ಹಂಚಿಕೆಗೂ ಕ್ರಮ ಕೈಗೊಂಡಿದ್ದು ಭೂಮಿ ನಿಗದಿಯಾಗಿದೆ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿವೇಶನ ಹಂಚಿಕೆಗೆ ಅನುಮೋದನೆಗೆ ಕಳಿಸಲಾಗಿದೆ. ಪಂಚನಹಳ್ಳಿಯಲ್ಲಿ ಶೀಘ್ರ ದ್ವಿಪಥ ರಸ್ತೆ ನಿರ್ಮಿಸುವ ಭರವಸೆ ನೀಡಿದರು. ಭದ್ರಾ ಉಪ ಕಣಿವೆ ಯೋಜನೆ 2ಹಂತಗಳು ಬಹುತೇಕ ಮುಕ್ತಾಯಗೊಂಡಿವೆ. 3 ಮತ್ತು 4ನೇ ಹಂತಕ್ಕೆ ಪರಿಷ್ಕೃತ ಡಿಪಿಆರ್ ಆಗಬೇಕಿದೆ. ಅದರಲ್ಲಿ ಈ ಭಾಗದ 38 ಕೆರೆಗಳಿಗೆ ನೀರು ತುಂಬಿಸುವುದೂ ನಮ್ಮ ಆಶಯ. ಪಂಚನಹಳ್ಳಿ ಹೋಬಳಿ ರೈತರು ನೀರಿನ ಕೊರತೆ ನಡುವೆ ಹೋರಾಟದ ಮೂಲಕ ಕೃಷಿ ಸಂಸ್ಕೃತಿ ಉಳಿಸಿದ್ದಾರೆ. ಮಲ್ಲಾಘಟ್ಟ ಕೆರೆಯಲ್ಲಿ 0.22 ಟಿಎಂಸಿ ನೀರು ನಿರಂತರ ಸಂಗ್ರಹಿಸಿದ ಮೇಲೆ ಹೇಳಿದ ಪಂಚನಹಳ್ಳಿ, ಗಂಗನಹಳ್ಳಿ, ಗರುಗದಹಳ್ಳಿ, ನಿಡುವಳ್ಳಿ ಕೆರೆಗಳೂ ಸೇರಿದಂತೆ 38 ಕೆರೆಗಳಿಗೆ ನೀರು ತುಂಬಿಸಿ ಈ ಭಾಗದ ಜನರು ನೆಮ್ಮದಿಯ ಬದುಕು ಕಂಡುಕೊಳ್ಳುವ ಬೇಡಿಕೆಗಳ ಈಡೇರಿಕೆಗೆ ಬದ್ಧನಾಗಿ ದ್ದೇನೆ. ಇದಕ್ಕಾಗಿ ₹200-250ಕೋಟಿ ಅನುದಾನ ಬೇಕಿದ್ದು ಸಿಎಂ ಮತ್ತು ಡಿಸಿಎಂ ಜತೆ ಮಾತನಾಡಿದ್ದೇನೆ. ಒಟ್ಟಾರೆ ತಿಮ್ಮಲಾಪುರ ಗ್ರಾಮ ಸೇರಿದಂತೆ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಿ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇಂದಿರಾ ಕ್ಯಾಂಟೀನ್ ರಾಜ್ಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಮಾತನಾಡಿ, 2011-12ರಲ್ಲಿ ಇಲ್ಲಿಗೆ ವಸತಿ ಶಾಲೆ ಮಂಜೂರಾದರೂ ಹಲವು ಸಮಸ್ಯೆಗಳು ಇದ್ದವು. ನಮ್ಮ ಶಾಸಕರು ಅವುಗಳನ್ನು ಬಗೆಹರಿಸಿ, ಹಣ ಮಂಜೂರು ಮಾಡಿಸಿದ್ದು ಅಭಿನಂದನಾರ್ಹ. ವಸತಿ ಶಾಲೆಗಾಗಿ 8 ಎಕರೆ, ಬಸ್ ಡಿಪೋ ಮತ್ತು ವಸತಿಗಾಗಿ 7 ಎಕರೆ ಭೂಮಿ ತಿಮ್ಮಲಾಪುರ ಗ್ರಾಮಸ್ಥರ ಸಹಕಾರದಿಂದ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ಪಂಚನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಪಣ್ಣ ಮಾತನಾಡಿ, ಹೆಣ್ಣುಮಕ್ಕಳಿಗಾಗಿ ವಸತಿನಿಲಯ ಸ್ಥಾಪನೆ ಬಹುದಿನಗಳ ಕನಸಾಗಿದೆ, ಅದನ್ನು ನೆರವೇರಿಸಿಕೊಡಿ ಎಂದು ಕೋರಿದರೆ, ತಿಮ್ಮಲಾಪುರದ ಮುಖಂಡ ದಿನೇಶ್ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಆಸಂದಿ ಕಲ್ಲೇಶ್, ಸದಸ್ಯೆ ಸುಜಾತ ಚಂದ್ರಶೇಖರ್ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ್, ಓಂಕಾರಮೂರ್ತಿ, ಸಿದ್ದರಾಮಪ್ಪ, ಸಂತೋಷ್, ಮುರಳಿ, ನಾಗರಾಜ್, ಜಗದೀಶ್, ರುದ್ರೇಗೌಡ, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಕೆ.ಬಸವರಾಜ್, ಶಿಕ್ಷಕರಾದ ಅಶ್ವಿನಿ, ಗುರುಮೂರ್ತಿ, ಚಿದಾನಂದ್, ರಮೇಶ್, ಆಶಾ, ಸಂದರ್ಶಿನಿ, ತಿಮ್ಮಲಾಪುರ ಮತ್ತು ಪಂಚನಹಳ್ಳಿ ಗ್ರಾಮಸ್ಥರು ಇದ್ದರು.4ಕೆಕೆಡಿಯು1.
ಕಡೂರು ತಾಲೂಕು ಪಂಚನಹಳ್ಳಿ ಹೋಬಳಿ ತಿಮ್ಮಲಾಪುರದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಪಂಚನಹಳ್ಳಿ ಪ್ರಸನ್ನ, ದಿನೇಶ್, ಕಲ್ಲೇಶ್ ಮತ್ತಿತರರು ಇದ್ದರು.