ಜಾತಿ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ನೂರು ಶ್ರೀಧರ

KannadaprabhaNewsNetwork | Published : Feb 4, 2025 12:31 AM

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿಯೇ ಜಾತಿ ದೌರ್ಜನ್ಯ ಅತಿಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಇದನ್ನು ತಡೆಯುವ ಸಲುವಾಗಿ ಜಾಗೃತಿ ಮೂಡಿಸಬೇಕಿದೆ.

ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ವತಿಯಿಂದ ಕಾರ್ಯಕರ್ತರ ಶಿಬಿರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿಯೇ ಜಾತಿ ದೌರ್ಜನ್ಯ ಅತಿಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಇದನ್ನು ತಡೆಯುವ ಸಲುವಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನೂರು ಶ್ರೀಧರ ಹೇಳಿದರು.

ನಗರದಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ವತಿಯಿಂದ ನಡೆದ ಕಾರ್ಯಕರ್ತರ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿಗಳ ದೌರ್ಜನ್ಯಕ್ಕೆ ಎಂದಿನಂತೆ ಮಾದಿಗ ಸಮುದಾಯವೇ ಬಹಿಷ್ಕಾರ, ಅತ್ಯಾಚಾರ, ಕೊಲೆ, ದೌರ್ಜನ್ಯ, ಅಸ್ಪೃಶ್ಯತೆಗೆ ಅತಿಹೆಚ್ಚು ಬಲಿಯಾಗುತ್ತಿರುವ ಸಮುದಾಯವಾಗಿದೆ. ಜಾತಿಯ ಅಂಧಕಾರದೊಳಗೆ ನಲುಗುತ್ತಿರುವ ಜನರನ್ನು ಹೊರತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಭಾರತದಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುವ ಜಾತಿ ತಾರತಮ್ಯ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಧರ್ಮ-ನಂಬಿಕೆಯ ತಾರತಮ್ಯಗಳು ಅಸ್ಪೃಶ್ಯ ಸಮುದಾಯಗಳ ನಿಟ್ಟುಸಿರನ್ನು ನಿಲ್ಲಿಸುವುದರಲ್ಲಿ ವಿಫಲಗೊಂಡಿವೆ. ಆಧುನಿಕತೆ ಬೆಳೆದಿದ್ದರೂ ಶೋಷಣೆಯ ಮಗ್ಗಲುಗಳು ಬೇರೆ ಬೇರೆ ರೂಪಗಳಲ್ಲಿ, ಹೊಸ ಹೊಸ ಪರಿಭಾಷೆ, ಮುಸುಕಿನೊಳಗೆ ಬೆರೆತುಕೊಂಡು ತಮ್ಮ ತನವನ್ನು ಬಿಟ್ಟುಕೊಡದೆ ಉಳಿದುಕೊಂಡು ಮುಂದುವರೆಯುತ್ತಿವೆ ಎಂದರು.

ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಮಾದಿಗ ಸಮುದಾಯದೊಂದಿಗೆ ಇತರೆ ಅಸ್ಪೃಶ್ಯ ಸಮುದಾಯಗಳು ತಮ್ಮ ಹಕ್ಕಿಗಾಗಿ ಸಂಘಟಿತಗೊಳ್ಳುತ್ತಾ ಹೋರಾಟ ನಡೆಸಬೇಕಾದ ಅನಿರ್ವಾಯತೆ ಇದೆ. ಜಾತಿಯಲ್ಲಿ ಆರ್ಥಿಕವಾಗಿ ಮುಂದುವರೆದ ಸಮುದಾಯಗಳು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಧ್ವನಿ ಇಲ್ಲದ ಸಮುದಾಯಗಳನ್ನು ಇಲ್ಲಿಯವರೆಗೂ ತುಳಿದುಕೊಂಡೇ ಬರುತ್ತಿವೆ. ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಕಳೆದ ದಶಕದುದ್ದಕ್ಕೂ ಸಮಪಾಲು, ಸಮಬಾಳು ಎಂಬ ಘೋಷವಾಕ್ಯದೊಂದಿಗೆ ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಧ್ವನಿಯಾಗುತ್ತಾ ಕೆಲಸ ಮಾಡುತ್ತಾ ಬರುತ್ತಿದೆ. ಕಳೆದ ಎರಡು ದಶಕಗಳ ಕಾಲ ನಡೆದ ಒಳ ಮೀಸಲಾತಿ ಹೋರಾಟದಲ್ಲಿ ದಿಟ್ಟ ಪಾತ್ರ ನಿರ್ವಹಿಸಿದೆ ಎಂದರು.

ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ, ವೈಚಾರಿಕಗೊಳಿಸುವ ಹಾಗೂ ಬಲಪಡಿಸುವ ಅಗತ್ಯವಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸಕ್ರಿಯ ಕಾರ್ಯಕರ್ತರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಈ ಕಾರ್ಯಾಗಾರದಲ್ಲಿ ಜಾತಿ ವ್ಯವಸ್ಥೆಯ ಹುಟ್ಟು, ಮಾದಿಗ ಸಮುದಾಯ ರೂಪಗೊಂಡ ಇತಿಹಾಸ, ಪ್ರಸ್ತುತ ಸವಾಲುಗಳು ಹಾಗೂ ಮುಂದಿನ ದಾರಿಗಳ ಬಗ್ಗೆ ಕೂಲಂಕಷ ಚರ್ಚೆ ನಡೆಯಲಿದೆ ಎಂದರು.

ಈ ಸಂದರ್ಭ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಮುಖಂಡರಾದ ಕರಿಯಪ್ಪ ಗುಡಿಮನಿ, ಮುದುಕಪ್ಪ ಹೊಸಮನಿ, ಹ್ಯಾಟಿ ಹುಲುಗಪ್ಪ, ದುರಗೇಶ ಬರಗೂರು, ಯಮನೂರು ಮುದ್ದಾಬಳ್ಳಿ, ಡಿ.ಎಚ್. ಪೂಜಾರ್, ಕೆ.ಬಿ. ಗೋನಾಳ, ಕುಮಾರ್ ಸಮಾತಳ ಸೇರಿದಂತೆ ಹಲವರು ಇದ್ದರು.

Share this article