ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸ್ವಚ್ಛ ಕಾವೇರಿಗಾಗಿ ಯಾತ್ರೆ ಕೈಗೊಂಡ ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು ಜಿಲ್ಲೆಯ ಗಡಿಭಾಗ ಶಿರಂಗಾಲ ಮೂಲಕ ಹಾಸನ ಜಿಲ್ಲೆಯತ್ತ ಸಾಗಿದರು.
ಕನ್ನಡಪ್ರಭವಾರ್ತೆ ಕುಶಾಲನಗರ
ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸ್ವಚ್ಛ ಕಾವೇರಿಗಾಗಿ ಯಾತ್ರೆ ಕೈಗೊಂಡ ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು ಜಿಲ್ಲೆಯ ಗಡಿಭಾಗ ಶಿರಂಗಾಲ ಮೂಲಕ ಹಾಸನ ಜಿಲ್ಲೆಯತ್ತ ಸಾಗಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿ ಸಂಘ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿಯಿಂದ ಈ ತಿಂಗಳ 26ರಂದು ಚಾಲನೆಗೊಂಡಿತ್ತು.
ಭಾಗಮಂಡಲ ಕುಶಾಲನಗರ ಮೂಲಕ ಕಣಿವೆ ಮಾರ್ಗವಾಗಿ ರಾಮನಾಥಪುರದತ್ತ ರಥಯಾತ್ರೆ ಸಾಗಿದೆ.
ಕುಶಾಲನಗರದಲ್ಲಿ ನಡೆದ ಧಾರ್ಮಿಕ ಸಾಂಸ್ಕೃತಿಕ ಮತ್ತು ಬೆಳದಿಂಗಳ ಊಟ ಕಾರ್ಯಕ್ರಮ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಿತು.
ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ಉದ್ಯಾನವನದಲ್ಲಿ ಸಂಜೆ ತಮಿಳುನಾಡಿನ ಮೆಟ್ಟೂರು ಬ್ರದರ್ಸ್ ತಂಡದಿಂದ ಹಾಗೂ ಕುಶಾಲನಗರ ಝೇಂಕಾರ್ ಆರ್ಕೆಸ್ಟ್ರಾ ತಂಡದ ರವಿ ಅವರ ನೇತೃತ್ವದಲ್ಲಿ ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹರಿದ್ವಾರದ ಅಖಂಡ ಪರಂಧಾಮ್ ಕ್ಷೇತ್ರದ ಸ್ವಾಮಿ ಅನಂತಾನಂದ ಗಿರಿ ಜಿ ಮಾತನಾಡಿ ನದಿ ಪ್ರಕೃತಿ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕು. ಯಾವುದೇ ಸಂದರ್ಭ ಪ್ರಕೃತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡು ಬರಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಮಾತನಾಡಿದ ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಶಿವರಾಮನಂದ ಸ್ವಾಮೀಜಿ ತಲಕಾವೇರಿಯಿಂದ ಹುಟ್ಟುವ ಜೀವನದಿ ಕಾವೇರಿ ಸಮುದ್ರ ಸಂಗಮ ತನಕ ಸ್ವಚ್ಛವಾಗಿ ಹರಿಯಬೇಕು ಅನ್ನುವ ಗುರಿ ಹೊಂದುವ ಮೂಲಕ ಕಳೆದ 16 ವರ್ಷಗಳಿಂದ ಕಾವೇರಿ ನದಿ ಜಾಗೃತಿ ರಥಯಾತ್ರೆ ನಡೆಯುತ್ತಿದೆ ಒಂದು ತಿಂಗಳ ಕಾಲ ನದಿ ತಟದಲ್ಲಿ ಸಂಚರಿಸಿ ಜನರಿಗೆ ನದಿಯ ಮಹತ್ವದ ಬಗ್ಗೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ನದಿ ಪ್ರಕೃತಿಯ ಆರಾಧನೆಯ ಮೂಲಕ ಪರಿಸರದ ಸಂರಕ್ಷಣೆ ಸಾಧ್ಯ ಎಂದರು
ತಲಕಾವೇರಿ ಕ್ಷೇತ್ರದಿಂದ ಪವಿತ್ರ ತೀರ್ಥವನ್ನು ಕಳಶ ಮೂಲಕ ತೆಗೆದುಕೊಂಡು ಯಾತ್ರೆಯ ಉದ್ದಕ್ಕೂ ಪೂಜಿಸಿ ನ.17ರಂದು ತಮಿಳುನಾಡಿನ ಪೂಂಪ್ ಹಾರ್ ಸಮುದ್ರ ಸಂಗಮ ದಲ್ಲಿ ಪವಿತ್ರ ತೀರ್ಥವನ್ನು ಹೋಮ ಹವನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಸಮುದ್ರದಲ್ಲಿ ವಿಸರ್ಜಿಸಿ ಸಮಾಜದ ಒಳಿತಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಲಾಗುವುದು ಎಂದರು.
ನದಿ ಸಂರಕ್ಷಣೆಗಾಗಿ ಎರಡು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಗಳ ಬಳಿ ನಿಯೋಗ ತೆರಳಿ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.
ಉದ್ಯಮಿಗಳು ಹಾಗೂ ರೋಟರಿ ಕುಶಾಲನಗರ ಮಾಜಿ ಅಧ್ಯಕ್ಷರಾದ ಮನು ಪೆಮ್ಮಯ್ಯ ಅವರು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ನದಿ ಕಲುಷಿತ ಗೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಮಾಮಿಕಾವೇರಿ ಜಿಲ್ಲಾ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾ ಸಂಚಾಲಕರಾದ ಕೊಡಗನ ಹರ್ಷ ನಮಾಮಿ ಕಾವೇರಿ ಗೌರವ ಸಲಹೆಗಾರರಾದ ಸುಮನ ಮಳಲಗದ್ದೆ, ನಮಾಮಿ ಕಾವೇರಿ ಜಿಲ್ಲಾ ಸಂಚಾಲಕರಾದ ವಿಠಲ ಸಾಲಿಯಾನ್ ಮತ್ತು ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿ ಸದಸ್ಯರು, ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರುಗಳು, ಸಮಿತಿಗಳ ಪ್ರಮುಖರು ಇದ್ದರು. ಅಭಿಷೇಕ: ಕುಶಾಲನಗರದಿಂದ ರಾಮನಾಥಪುರ ಕಡೆ ತೆರಳುವ ಸಂದರ್ಭ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿ ತೆರಳಿದ ತಂಡ ಕಾವೇರಿ ಮಾತೆ ವಿಗ್ರಹಕ್ಕೆ ಅಭಿಷೇಕ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷರಾದ ಕೆ ಎನ್ ಸುರೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಮತ್ತಿತರರು ಇದ್ದರು.
ರಾಮನಾಥಪುರದಲ್ಲಿ ಅರಕಲಗೂಡು ಶಾಸಕರಾದ ಎ ಮಂಜು ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ರಥವನ್ನು ಮತ್ತು ಸಾಧುಸಂತರ ತಂಡವನ್ನು ಬರಮಾಡಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.