ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು-ಜಿಲ್ಲಾಧಿಕಾರಿ

KannadaprabhaNewsNetwork |  
Published : Oct 29, 2025, 11:00 PM IST
27ಎಚ್‌ವಿಆರ್7 | Kannada Prabha

ಸಾರಾಂಶ

ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾರ್ಕೊ ಸಮನ್ವಯ ಕೇಂದ್ರ (ಎನ್‌ಸಿಓಆರ್‌ಡಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಮಾದಕ ವಸ್ತುಗಳ ಬಳಕೆಯ ಪರಿಶೀಲನೆ, ಮಾದಕ ವಸ್ತುಗಳ ಸಾಗಾಣಿಕೆಯ ತಪಾಸಣೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮುಡಿಸುವುದು ಮಹತ್ವದಾಗಿದೆ. ಜಿಲ್ಲೆಯ ಪ್ರತಿಯೊಂದು ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ವೈದ್ಯಕೀಯ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನಹರಿಸಬೇಕು ಮತ್ತು ಹೆಚ್ಚು ಹೆಚ್ಚು ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಿರಂತರವಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಆಗ ವಿದ್ಯಾರ್ಥಿಗಳು ಜಾಗೃತರಾಗಿ ಮಾದಕ ವಸ್ತುಗಳ ಬಳಕೆಗೆ ಭಯಪಟ್ಟುಕೊಳ್ಳುವಂತಾಗುತ್ತಾರೆ ಎಂದರು.ಕೆಎಸ್‌ಆರ್‌ಟಿ ಬಸ್ಸುಗಳಲ್ಲಿ ಖಾಸಗಿ ವ್ಯಕ್ತಿಗಳು ಕಳಿಸುವ ಪಾರ್ಸಲ್‌ಗಳನ್ನು ತೆಗೆದುಕೊಳ್ಳದಂತೆ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸೂಚಿಸಬೇಕು. ಒಂದು ವೇಳೆ ಪಾರ್ಸಲ್ ತೆಗೆದುಕೊಂಡಲ್ಲಿ ಪಾರ್ಸಲ್ ನೀಡುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳವಂತಾಗಬೇಕು. ಈ ಕುರಿತು ಕಠಿಣ ನಿಲುವು ತೆಗೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಾಗೆಯೇ ಹೆಚ್ಚು ಭಾರವನ್ನು ಹೊತ್ತು ತರುವಂತಹ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು. ಔಷಧಿ ಅಂಗಡಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಯಾವೆಲ್ಲ ಔಷಧಿಗಳು ಮಾರಾಟಕ್ಕಿವೆ, ಯಾವೆಲ್ಲ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುವುದನ್ನು ನೋಡಿಕೊಳ್ಳಬೇಕು. ಆಪ್ತ ಸಮಾಲೋಚನೆಯಲ್ಲಿರುವ ಮಾದಕ ವ್ಯಸನಿಗಳು ಯಾವ ಮೂಲದಿಂದ ಅವರುಗಳು ಮಾದಕ ವ್ಯಸನರಾದರು ಎನ್ನುವುದರ ಮಾಹಿತಿ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಅಂಚೆ ಇಲಾಖೆಯ ಮುಖಾಂತರ ಬರುವ ಪ್ರತಿಯೊಂದು ವಸ್ತುಗಳನ್ನು ಪರೀಕ್ಷಿಸಬೇಕು, ಹಾಗೆಯೇ ಆನ್‌ಲೈನ್ ಶಾಪಿಂಗ್ ಮೂಲಕ ಜಿಲ್ಲೆಗೆ ಸಾಕಷ್ಟು ವಸ್ತುಗಳು ಬರುತ್ತವೆ ಇದಕ್ಕಾಗಿ ಪ್ರೈವೇಟ್ ಕೊರಿಯರ್ ಪಾರ್ಟ್ನರ್ ಗಳ ಮೇಲೆ ಹೆಚ್ಚು ನಿಗಾ ಇರಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಹಾಗೂ ಕಾನೂನಿನಡಿ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಕುರಿತು ದತ್ತಾಂಶಗಳ ಸಹಿತ ಆಯಾ ಭಾಗಗಳಲ್ಲಿ ಅರಿವು ಮೂಡಿಸಲಾಗಿದೆ. ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರವಲ್ಲದೆ ಪ್ರತಿಯೊಂದು ಇಲಾಖೆಗಳು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಮಾದಕ ವಸ್ತುಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಮಾಡಬೇಕು. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಇದಕ್ಕೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಹಾಗೆಯೇ ಮುಂದಿನ 15 ದಿನಗಳ ಒಳಗಾಗಿ ಪ್ರತಿಯೊಂದು ಶಾಲೆ,ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಮಾದಕ ವಸ್ತುಗಳ ಬಳಕೆ ದುಷ್ಪರಿಣಾಮ ಕುರಿತು ಅರಿವು ಮೂಡಿಸಿರುವುದರ ಬಗ್ಗೆ ದತ್ತಾಂಶಗಳ ಸಹಿತ ಮಾಹಿತಿ ನೀಡುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಅಧಿಕಾರಿಗಳ ನಡೆಗೆ ಜಿಲ್ಲಾಧಿಕಾರಿಗಳ ಅಸಮಧಾನ: ಕಳೆದ ಸಭೆಯಲ್ಲಿ ಕೆಲವು ಆಯ್ದ ಶಾಲೆ, ಕಾಲೇಜು, ಹಾಸ್ಟೆಲ್ ಹಾಗೂ ಜನವಸತಿ ಪ್ರದೇಶಗಳನ್ನು ಗುರುತಿಸಿಕೊಂಡು ಆ್ಯಂಟಿ ಡ್ರಗ್ ಸ್ಕ್ವಾಡ್ ಕಮಿಟಿ ರಚಿಸಿಕೊಂಡು ಮಾದಕ ವಸ್ತುಗಳ ಬಳಕೆ ದುಷ್ಪರಿಣಾಮ ಕುರಿತು ಹೆಚ್ಚು ಹೆಚ್ಚು ಅರಿವು ಮೂಡಿಸುವಂತೆ ಕಾರ್ಯಕ್ರಮ ಹಮ್ಮಿಕೊಂಡು ಪ್ರಗತಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ನಿಗದಿತ ಗುರಿ ತಲುಪದೇ ಸಭೆಗೆ ಹಾಜರಾದ ಅಧಿಕಾರಿಗಳನ್ನು ಕಂಡು ಜಿಲ್ಲಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿ, ಮುಂದಿನ ಸಭೆಯಲ್ಲಿ ಕಟ್ಟು ನಿಟ್ಟಾಗಿ ಸಭೆಯ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ನೀಡಿರುವ ಕೆಲಸವನ್ನು ನಿಭಾಯಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!