ಪ್ಲಾಸ್ಟಿಕ್ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಬೇಕು: ಅರವಿಂದ ಸಿಗದಾಳು

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಪ್ರಗತಿಪರ ಕೃಷಿಕ ಅರವಿಂದ ಸಿಗದಾಳು ಹೇಳಿದರು. ಶೃಂಗೇರಿಯಲ್ಲಿ ಉಪಾಹಾರಗಳ ವಿತರಣಾ ಪರಿಕರಗಳ ಬ್ಯಾಂಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೌಕರರ ಸಂಘ ಆಯೋಜನೆ

ಶೃಂಗೇರಿ: ಇತ್ತಿಚಿನ ದಿನಗಳಲ್ಲಿ ದಿನೇ ದಿನೇ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಾಣುತ್ತೇವೆ. ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ಮಾತ್ರವಲ್ಲದೇ ಮನುಷ್ಯ, ಪ್ರಾಣಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಪ್ರಗತಿಪರ ಕೃಷಿಕ ಅರವಿಂದ ಸಿಗದಾಳು ಹೇಳಿದರು.

ಪಟ್ಚಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ್ದ ಉಪಾಹಾರಗಳ ವಿತರಣಾ ಪರಿಕರಗಳ ಬ್ಯಾಂಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತಿಚಿನ ದಿನಗಳಲ್ಲಿ ಪ್ಲಾಸ್ಟಿಕ್ ಮಾನವನ ಅವಿಭಾಜ್ಯ ಅಂಗವಾಗಿದ್ದಂತೆ ಕಾಣುತ್ತಿದೆ.ಏಕೆಂದರೆ ಕಡಿಮೆ ದರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಸಿಗುತ್ತಿರುವುದರಿಂದ ಎಲ್ಲರೂ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ಲಾಸ್ಟಿಕ್ ವಸ್ತುಗಳಲ್ಲಿ ಪಾಲಿ ಪ್ರೋರಿನೇಟೆಡ್ ಸೀಸದಂತಹ ಅಪಾಯಕಾರಿ ರಾಸಾಯನಿಕವಸ್ತುಗಳ ಬಳಕೆಯಾಗುತ್ತಿದೆ.ಇದು ಮನುಷ್ಯನ ಆರೋಗ್ಯ ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಪ್ಲಾಸ್ಟಿಕ್ ತಯಾರಿಕಾ ಹಂತದಲ್ಲಿ ದೊಡ್ಡಮಟ್ಟದ ಮಾಲಿನ್ಯ ಉಂಟಾಗುತ್ತಿದೆ ಎಂದರು.

ಚರ್ಮ, ಕಣ್ಣುಗಳಿಗೆ ಹಾನಿ, ಉಸಿರಾಟದ ತೊಂದರೆ, ಹಾರ್ಮೋನುಗಳ ವ್ಯತ್ಯಾಸ, ಪ್ಲಾಸ್ಟಿಕ್ ಯುಕ್ತ ವಸ್ತುಗಳು ಮನುಷ್ಯನ ದೇಹಕ್ಕೆ ಸೇರಿದಾಗ ಕಾಡುವ ಅನಾರೋಗ್ಯಗಳು ಗಂಭೀರ ಪರಿಣಾಮ ಉಂಟುಮಾಡುತ್ತದೆ. 100 ವರ್ಷ ಕಳೆದರೂ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಎಂದಿಗೂ ನಾಶವಾಗುವುದಿಲ್ಲ. ಪ್ರಾಣಿ, ಪಕ್ಷಿ, ಜಲಚರದ ಜೊತೆಗೆ ಸಸ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಇಂತಹ ಕೆಟ್ಟ ಪ್ಲಾಸ್ಟಿಕ್ ವಸ್ತುಗಳನ್ನು ನಾವು ಬಳಕೆ ಮಾಡಬಾರದು. ಅದಕ್ಕೆ ಪರ್ಯಾಯವಾದ ವಸ್ತುಗಳನ್ನು ನಾವು ಬಳಕೆ ಮಾಡಬೇಕು ಎಂದರು.

ಕೆ.ಶಶಿಧರ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಮಾರಕ. ವಿದ್ಯಾವಂತ ಯುವಜನತೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಎಲ್ಲರೂ ಕೈಜೊಡಿಸಬೇಕು ಎಂದರು.

ಸಾಹಿತಿ ಪ್ರಭಾಕರ ಕಾರಂತ ಕಾರ್ಯಕ್ರಮ ಉದ್ಘಾಟಿಸಿದರು. ತಲಗಾಕು ರಮೇಶ್, ಉಮಾಕಾರಂತ್, ಜಿ.ಎಂ.ಸತೀಶ್, ಯು.ಎಸ್.ಶಿವಶಂಕರ್, ಪಪಂ ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್, ಕವನಾ ಮತ್ತಿತರರು ಇದ್ದರು.

Share this article