ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಬಾಂಗ್ಲಾ ದೇಶದ ಪರಿಸ್ಥಿತಿ ಗಮನಿಸಿದರೆ ಸ್ವಾತಂತ್ರ್ಯ ಎಂಬುವುದು ಎಷ್ಟು ಅಮೂಲ್ಯವೆಂದು ತಿಳಿಯುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಗುರುವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಜಾತಿ, ಧರ್ಮ, ವೈವಿಧ್ಯತೆ ನಡುವೆ ಸ್ವಾತಂತ್ರ್ಯ ದಿನಾಚರಣೆ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡುವ ಮೂಲಕ ಸ್ವಾತಂತ್ರ್ಯದ ಅಮೂಲ್ಯತೆ ಬಗ್ಗೆ ಯುವ ಜನಾಂಗಕ್ಕೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಈ ವರ್ಷ ಉತ್ತಮ ಮಳೆಯಾಗಿದ್ದು, ನದಿ, ಹಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿರುವುದು ಒಂದೆಡೆ ಸಂತಸ ತಂದರೆ, ಮತ್ತೊಂದೆಡೆ ರಸ್ತೆ, ಸೇತುವೆ, ಬೆಳೆ ಹಾನಿಯಿಂದ ಜನ ತತ್ತರಿಸುವಂತಾಗಿದೆ. 2019 ರಲ್ಲಿ ಉಂಟಾದ ಪ್ರವಾಹದಿಂದ ಇಂದಿಗೂ ಮಲೆಮನೆ, ಮದುಗುಂಡಿ ಸಂತ್ರಸ್ತರಿಗೆ ಭೂಮಿ ನೀಡಲು ಸಾಧ್ಯವಾಗಿಲ್ಲ. ಅಲ್ಲದೇ ಕಳೆದ ವರ್ಷ ನಿವೇಶನಕ್ಕೆ ಕಾಯ್ದಿರಿಸಿದ್ದ 100 ಎಕರೆ ಭೂಮಿ ಗ್ರಾಪಂ ಹಸ್ತಾಂತರಗೊಳಿಸಿದ್ದರೂ ಫಲಾನುಭವಿಗಳಿಗೆ ನಿವೇಶನ ನೀಡದೇ ಬಾಕಿ ಇರುವುದು ತನಗೆ ನೋವು ತಂದಿದೆ. ನಿವೇಶನ ಹಂಚಿಕೆ ಮಾಡಲು ಎಲ್ಲಾ ಪಕ್ಷದವರು ಸಹಕರಿಸಬೇಕೆಂದು ಮನವಿ ಮಾಡಿದರು. ರಾಜ್ಯ ಸರಕಾರ ಒತ್ತುವರಿ ಅರಣ್ಯ ಬಿಡಿಸಲು ಕೈಗೊಂಡಿರುವ ನಿರ್ಧಾರದಿಂದ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ. ಪರಿಸರ ನಾಶದಿಂದ ಕೇರಳದ ವಯನಾಡು ದುರಂತ ಕಣ್ಮುಂದೆ ಕಾಣುತ್ತಿದೆ. ಹಾಗಾಗಿ ಅರಣ್ಯ ಉಳಿಸುವುದು ಅನಿವಾರ್ಯವಾಗಿದೆ ಎಂದ ಅವರು, ತಾಲೂಕಿನಲ್ಲಿ ಸಿಇಟಿ, ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್ ಸೆಂಟರ್ ಶೀಘ್ರದಲ್ಲೆ ಪ್ರಾರಂಭಿಸಲಾಗುವುದು. ಕ್ಷೇತ್ರ ಅಭಿವೃದ್ಧಿಗೆ ಕಳೆದ ವರ್ಷ 89 ಕೋಟಿ ಅನುದಾನ ತಂದಿದ್ದೇನೆ. ಮುಂದೆ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಹೇಳಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ವಿವಿಧ ಇಲಾಖೆ ಸವಲತ್ತು ಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ರಾಜಶೇಖರ್ ಧ್ವಜಾರೋಹಣ ನೆರವೇರಿಸಿದರು. ಪ.ಪಂ. ಸದಸ್ಯರಾದ ಕೆ.ವೆಂಕಟೇಶ್, ಎಚ್.ಪಿ.ರಮೇಶ್, ಅನುಕುಮಾರ್, ಕೆ.ಸುಧೀರ್, ಹಂಜಾ, ಮನೋಜ್ ನಾಮ ನಿರ್ದೇಶನ ಸದಸ್ಯರಾದ ಜಯಮ್ಮ, ಅಜ್ಮಲ್, ತಾಪಂ ಇಒ ದಯಾವತಿ, ಬಿಇಒ ಹೇಮಂತಚಂದ್ರ, ಪಿಎಸ್‌ಐ ಶ್ರೀನಾಥ್‌ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. 15 ಎಂಡಿಜಿ 1ಬಿಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.