ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ

KannadaprabhaNewsNetwork |  
Published : Feb 18, 2026, 02:30 AM IST
ಕಾಳಿನದಿ ನೀರಾವರಿ ಯೋಜನೆಗಾಗಿ ಆಗ್ರಹಿಸಿ ಆರಂಭಿಸಲಿರುವ ಪಾದಯಾತ್ರೆಯ ಪೋಸ್ಟರನ್ನು ಜಿವೋಜಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕಾಳಿನದಿ ನೀರಾವರಿ ಯೋಜನೆಯ ಕುರಿತು ರೈತ ಸಮುದಾಯದಲ್ಲಿ ಜನಜಾಗೃತಿ ಮೂಡಿಸಲು ಫೆ. 27ರಿಂದ ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ನೀರಿಗಾಗಿ ಹೆಜ್ಜೆ ಹಾಕಿ ಎಂಬ ಜಲಕಾಳಜಿಯುಳ್ಳ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.

ಹಳಿಯಾಳ: ಕಾಳಿನದಿ ನೀರಾವರಿ ಯೋಜನೆಯ ಕುರಿತು ರೈತ ಸಮುದಾಯದಲ್ಲಿ ಜನಜಾಗೃತಿ ಮೂಡಿಸಲು ಫೆ. 27ರಿಂದ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ನೀರಿಗಾಗಿ ಹೆಜ್ಜೆ ಹಾಕಿ ಎಂಬ ಜಲಕಾಳಜಿಯುಳ್ಳ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.

ಮಂಗಳವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಾಗಿ ನಡೆಸಲಿರುವ ಜೀವಜಲ ಹೋರಾಟ-ಜನಜಾಗೃತೆಯ ರೂಪುರೇಷೆಗಳನ್ನು ಬಹಿರಂಗಪಡಿಸಿದರು. 2017ರಲ್ಲಿ ಶಿಲಾನ್ಯಾಸ ಕಂಡ ಕಾಳಿನದಿ ನೀರಾವರಿ ಯೋಜನೆ 9 ವರ್ಷಗಳಾದರೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕಿನ ರೈತರಿಗೆ ಈ ಯೋಜನೆಯು ಬದುಕಿನ ಪ್ರಶ್ನೆಯಾಗಿದೆ ಎಂದು ಹೇಳಿದರು.

ಪ್ರಸ್ತುತ ಕಾಳಿನದಿ ನೀರಾವರಿ ಯೋಜನೆಯಲ್ಲಿ ಕೆರೆಗಳನ್ನು ಹಾಗೂ ಬಾಂದಾರುಗಳನ್ನು ತುಂಬಿಸಲಾಗುತ್ತದೆ. ಆದರೆ ಇಷ್ಟು ಮಾಡಿದರೆ ಸಾಲದು. ಈ ಕೆರೆಗಳಿಂದ ರೈತರ ಹೊಲ-ಗದ್ದೆಗಳಿಗೆ ನೀರು ಹರಿಯಬೇಕು. ಈ ಕುರಿತು ಯೋಜನೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಶಾಸಕರಾಗಲಿ ಅಧಿಕಾರಿಗಳಾಗಲಿ ಈ ಕುರಿತು ಯಾವುದೇ ಚಕಾರ ಎತ್ತುತ್ತಿಲ್ಲ. ಸಾಕಷ್ಟು ಗ್ರಾಮಗಳಲ್ಲಿ ಕೆರೆಗಳಿಲ್ಲ, ಹೀಗಿರುವಾಗ ಈ ಗ್ರಾಮಗಳು ನೀರಾವರಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಅದಕ್ಕಾಗಿ ತಾಲೂಕಿನ ಎಲ್ಲ ಗ್ರಾಮಗಳ ಹೊಲಗಳಿಗೆ ನೀರಾವರಿ ಯೋಜನೆಯ ಲಾಭ ದೊರೆಯುವಂತೆ ಯೋಜನೆಯನ್ನು ಮರುಪರಿಶೀಲಿಸಿ, ವಿಸ್ತೃತ ಯೋಜನೆ ಜಾರಿಗೊಳಿಸಬೇಕು ಎಂದರು.

ನೀರಾವರಿ ಯೋಜನೆಯನ್ನು ಅನಗತ್ಯವಾಗಿ ವಿಳಂಬ ಮಾಡಿ ರೈತರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ರಾಜಕಾರಣ ನಡೆಸಿರುವುದನ್ನು ಮನವರಿಕೆ ಮಾಡಲು ಈ ನಮ್ಮ ಪಾದಯಾತ್ರೆ ನಡೆಯಲಿದೆ ಎಂದರು.

ಸಾಕಷ್ಟು ಯೋಜನೆಗಳು ನೆನೆಗುದಿಗೆ: 2017ರಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖಾಂತರ ಕಾಳಿನದಿ ನೀರಾವರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ಯೋಜನೆ, ನಿರಂತರ ಕುಡಿಯುವ ನೀರಿನ ಯೋಜನೆಗೆ ಅಂದಾಜು ₹700 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಚಾರ ಗಿಟ್ಟಿಸಲಾಗಿತ್ತು. 2019ರಲ್ಲಿ ಈ ಎಲ್ಲ ಯೋಜನೆಗಳು ಕಾರ್ಯಾರಂಭಿಸಬೇಕಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯಾವ ಯೋಜನೆಯೂ ಆರಂಭವಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ತಾಲೂಕಿನ ಎಲ್ಲ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುವ ಈ ಪಾದಯಾತ್ರೆ ಕೊನೆಯಲ್ಲಿ ಹಳಿಯಾಳದಲ್ಲಿ ಬಹಿರಂಗ ಸಭೆ ಹಾಗೂ ಪ್ರತಿಭಟನೆಯ ಮೂಲಕ ಮೊದಲ ಹಂತದ ಹೋರಾಟ ಮುಕ್ತಾಯಗೊಳಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ, ಪ್ರಮುಖರಾದ ಅಶೋಕ ಮೇಟಿ, ಸಾತೇರಿ ಗೋಡೆಮನಿ, ಪುಂಡ್ಲೀಕ ಗೋಡೆಮನಿ, ರಾಮದಾಸ ಬೆಳಗಾಂವಕರ, ಸುರೇಶ ಶಿವಣ್ಣನವರ, ಮಹೇಶ ಪಾಳೇಕರ, ನಕುಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ
ಅಂಕೋಲಾದಲ್ಲಿಂದು ಆಳ್ವಾಸ್ ನುಡಿಸಿರಿ ವಿರಾಸತ್!