ಭಾರತೀಯ ಮಾನಕ ಬ್ಯೂರೋದಿಂದ ಜಾಗೃತಿ ಕಾರ್ಯಾಗಾರ

KannadaprabhaNewsNetwork | Published : Feb 12, 2025 12:32 AM

ಸಾರಾಂಶ

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯವರ ಜಾಗೃತಿ ಕಾರ್ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಿನ ನಿತ್ಯ ಬಳಸುವ ವಸ್ತುವಿನ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಅದರ ಗುಣಮಟ್ಟ ಹೇಗಿದೆ ಎಂಬುದು ಮುಖ್ಯ‌ ಎಂದು ಭಾರತೀಯ ಮಾನಕ ಬ್ಯೂರೋ ಸಂಸ್ಥೆಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾದ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯವರ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮುಖ್ಯವಾಗಿ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಆ ಕಾಮಗಾರಿಗಳಿಗೆ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ದೀರ್ಘಕಾಲ ಬಾಳಿಕೆ ಬರುವ ರಸ್ತೆ, ಚರಂಡಿ, ಕುಡಿಯುವ ನೀರಿನ ಸಾಮಗ್ರಿಗಳು ಬೇಗ ಹಾಳಗಬಹುದು. ಕಾಮಗಾರಿಗಳಿಗೆ ಬಳಸುವ (ಸೀಮೆಂಟ್, ಕಬ್ಬಿಣ, ಪೈಪ್, ಎಲೆಕ್ಟ್ರಾನಿಲ್‌ ಉಪಕರಣಗಳು) ವಸ್ತುಗಳ ಗುಣಮಟ್ಟದ ಕುರಿತು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯು ವಸ್ತುಗಳ ಗುಣಮಟ್ಟವನ್ನು ತಿಳಿಯಲು ಐಎಸ್‌ಐ ಮಾರ್ಕ್‌ನಂತಹ ಚಿಹ್ನೆಗಳಿರುವ ವಸ್ತುಗಳನ್ನು ಬಳಸಿ ಹಾಗೂ ವಸ್ತುಗಳ ಗುಣಮಟ್ಟವನ್ನು ತಿಳಿಯಲು ಬೇಸಿಕ್ ಕೇರ್ ಅಪ್ಲಿಕೇಶನ್ ಮೂಲಕ‌ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಲ್ಲದೆ ಚಿನ್ನ ಖರೀದಿಸುವಾಗ ಬಹಳ ಜಾಗ್ರತೆಯಿಂದ ಹಾಲ್ ಮಾರ್ಕ್ ಚಿಹ್ನೆ ಹಾಗೂ ಅದರ ಗುಣಮಟ್ಟದ (916) ಬಗ್ಗೆ ತಿಳಿದುಕೊಂಡು ಚಿನ್ನವನ್ನು ಖರೀದಿಸಬೇಕು. ಎಲೆಕ್ಟ್ರಾನಿಕ್ ಉಪಕರಣಗಳು, ಗೃಹೋಪಯೋಗಿ ಉಪಕರಣಗಳ ಖರೀದಿಸುವಾಗ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಮೋಹನ್, ಸಂಪನ್ಮೂಲ ವ್ಯಕ್ತಿಗಳಾದ ನೇತ್ರಾವತಿ, ಸಹಾಯ ಲೆಕ್ಕಾಧಿಕಾರಿಗಳಾದ ಗಣೇಶ್, ವಿರಾಜಪೇಟೆ/ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

Share this article