ಕನ್ನಡಪ್ರಭ ವಾರ್ತೆ ಬೇಲೂರು
ಜು.1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ವೈದ್ಯರಿಗೆ ವಿಶೇಷ ಗೌರವ ನೀಡುವ ಮೂಲಕ ಲಯನ್ಸ್ ಸೇವಾಸಂಸ್ಥೆ ವತಿಯಿಂದ ಆಚರಿಸಲಾಯಿತು.ಪಟ್ಟಣದ ಕಾವೇರಿ ಕ್ಲಿನಿಕ್‌ನಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಡಾ. ವಿಜಯ್, ಹಾಗೂ ಫಿಸಿಶಿಯನ್ ಡಾ.ರಾಜೀವ್ ಮತ್ತು ಡಾ. ಚಂದ್ರಮೌಳಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ಸ್ ಸಂಸ್ಥೆ ತಾಲೂಕು ಅಧ್ಯಕ್ಷ ಹಾಗೂ ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ, ನಮ್ಮ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಪ್ರತಿವರ್ಷ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಕೂಡ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್ ಮತ್ತು ಫಿಸಿಶಿಯನ್ ಡಾ.ರಾಜೀವ್ ಅವರ ಕಾರ್ಯ ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ನಮಗೆ ಅತ್ಯಂತ ಸಂತೋಷವಾಗಿದೆ. ವೈದ್ಯರ ಕಾರ್ಯಚಟುವಟಿಕೆಗಳನ್ನು ಜನರಿಗೆ ತಲುಪಿಸುವ ಉದ್ದೇಶವಾಗಿದೆ ಎಂದರು.ಜಗತ್ತನ್ನೇ ತಲ್ಲಣಗೊಳಿದ ಕೊರೋನಾ ಸಂಕಷ್ಟದ ಸಮಯದಲ್ಲಿಯೂ ವೈದ್ಯರು ಜನರ ಆರೋಗ್ಯಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ. ಅದರಲ್ಲೂ ಇತ್ತೀಚಿಗೆ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಾಣುತ್ತಿದ್ದು ಬಂದಂತ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ನೀಡುತ್ತಿದ್ದಾರೆ. ಹಾಗೆಯೆ ಖಾಸಗಿ ವೈದ್ಯರು ಕೂಡ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಗುರುತಿಸಿ ನಮ್ಮ ಲಯನ್ಸ್ ಸೇವಾ ಸಂಸ್ಥೆವತಿಯಿಂದ ಸನ್ಮಾನಿಸಲಾಗುತ್ತಿದ್ದು ಇದರ ಜೊತೆಗೆ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಮುಂದೆಯೂ ಕೂಡ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಲಾಗುವುದು ಎಂದು ತಿಳಿಸಿದರು.ನಂತರ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆ ಎಂಬ ತಾರತಮ್ಯವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಬಂದಂತ ರೋಗಿಗಳಿಗೆ ಉತ್ತಮವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಎಲ್ಲಾ ತರಹದ ಸಹಕಾರವನ್ನು ನೀಡುತ್ತಿದ್ದೇವೆ. ವೈದ್ಯರಾದ ಡಾ.ಚಂದ್ರಮೌಳಿಯವರು ರೋಗಿಗಳಿಗೆ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಬಂದರೆ ನಮಗೆ ಮಾಹಿತಿ ತಿಳಿಸುತ್ತಾರೆ. ಡೆಂಘೀ ಪ್ರಕರಣಗಳನ್ನು ಹೆಚ್ಚುತ್ತಿದ್ದು ನಾವು ತಾಲೂಕಿನಾದ್ಯಂತ ಜನರಿಗೆ ಸೂಕ್ತ ಮಾಹಿತಿ ನೀಡುವುದರ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಂತರ ಫಿಸಿಶಿಯನ್ ಡಾ. ರಾಜೀವ್ ಮಾತನಾಡಿ, ಬಿ.ಸಿ. ರಾಯ್ ಅವರ ಸವಿನೆನಪಿನಲ್ಲಿ ವೈದ್ಯರ ದಿನ ಆಚರಿಸಲಾಗುತ್ತಿದೆ. ಅದರಂತೆ ನಮ್ಮನ್ನು ಗುರುತಿಸಿ ವೈದ್ಯರ ದಿನಾಚರಣೆ ಪ್ರಯುಕ್ತ ಸನ್ಮಾನಿಸುತ್ತಿರುವುದು ಸಂತೋಷವಾಗಿದೆ. ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯವಿದ್ದು ಉತ್ತಮ ವೈದ್ಯರು ಇದ್ದಾರೆ. ಅದೇ ರೀತಿ ಆಸ್ಪತ್ರೆಗೆ ಬರುವಂತವರು ಕೂಡ ವೈದ್ಯರಲ್ಲಿ ಸೌಜನ್ಯವಾಗಿ ವರ್ತಿಸಬೇಕು ಎಂದು ತಿಳಿಸಿದರು.ಈ ವೇಳೆ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಮುಕ್ತಿಯಾರ್ ಅಹಮದ್, ಖಜಾಂಚಿ ಪ್ರಶಾಂತ್, ಸಂತೋಷ್, ನೌಷದ್, ಕುಮಾರ್, ವೈ.ಬಿ.ಸುರೇಶ್, ಕೆ.ಎಲ್ .ಸುರೇಶ್, ಬಿ.ಟಿ. ರವಿ, ಕುಮಾರ್, ಉಮೇಶ್, ಮಂಜುನಾಥ್, ಎಚ್‌ಡಿಎಫ್‌ಸಿ ಬ್ಯಾಂಕಿನ ಕಲ್ಲೇಶ್, ಪ್ರೀತು, ಚಂದ್ರಮೌಳಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.