ಕನ್ನಡಪ್ರಭ ವಾರ್ತೆ ಬಳ್ಳಾರಿ
ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ನಾರಾಯಣಗೌಡ ಬಣ) ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಶಾಂತಿಪ್ರಿಯರ ರಾಜ್ಯ ಎಂದೇ ಹೇಳಲಾಗುವ ಕರ್ನಾಟಕಕ್ಕೆ ಹೊರ ರಾಜ್ಯಗಳ ಜನರ ವಲಸೆ ಪ್ರಮಾಣ ಅಪಾರವಾಗಿದೆ. ಇತ್ತೀಚಿನ ಎರಡು ಮೂರು ದಶಕಗಳಲ್ಲಿ ವಲಸೆ ಮತ್ತಷ್ಟು ಹೆಚ್ಚಾಗಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರದ ರಾಜ್ಯಗಳು, ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದುಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿನಂತಹ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ. ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ಮಹಾವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವಸಮುದಾಯದ ಮೇಲೆ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ. ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೇ ಮುಂದುವರಿದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗುವ ಸ್ಥಿತಿ ಬಂದೊದಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಅಂಗಡಿ ಶಂಕರ್ ಡಿ.ಕಗ್ಗಲ್ ಮಾತನಾಡಿ, ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ದಕ್ಕಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯವ್ಯಾಪಿ ಹೋರಾಟ ರೂಪಿಸಿದೆ ಎಂದು ಹೇಳಿದರು.ಇಲ್ಲಿನ ಡಬಲ್ ರಸ್ತೆಯಲ್ಲಿರುವ ವೇದಿಕೆ ಜಿಲ್ಲಾ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.
ವೇದಿಕೆ ಜಿಲ್ಲಾಉಪಾಧ್ಯಕ್ಷ ತಿಪ್ಪಾರೆಡ್ಡಿ ಕೋಳೂರು, ವಿಶ್ವನಾಥ, ಶಬರಿ ರವಿಕುಮಾರ್, ಸತ್ಯನಾರಾಯಣ ಮಾಸ್ತಿ, ಗೆಣಿಕೆಹಾಳ್ ವೀರೇಶ್, ಬಳೆ ಮಲ್ಲಿಕಾರ್ಜುನ, ಪೊಂಪನಗೌಡ, ಚಾಂದ್‌ಬಾಷಾ, ಬಾವಿ ಶಿವಕುಮಾರ್, ನಂದೀಶ್, ಶ್ರೀಧರಶೆಟ್ಟಿ, ಮಲ್ಲಯ್ಯ, ಜಂಗ್ಲಿಸಾಬ್, ಮಸ್ಕಿ ಮಹಾಂತೇಶ್, ಚಾನಾಳ್ ಮಲ್ಲಿಕಾರ್ಜುನ ಸೇರಿದಂತೆ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.