ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಪತ್ರಿಕಾ ದಿನಾಚರಣೆ’ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ಕೆಲ ಸಮಯಗಳಿಂದ ದೃಶ್ಯ ವಾಹಿನಿಗಳು ಒಂದು ಸಾವಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಚಾರಗಳಿಗೆ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸುತ್ತಿವೆ. ಇವುಗಳನ್ನು ಮೀರಿ ನಮ್ಮ ಸುತ್ತಮುತ್ತಲ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ, ನಮ್ಮಲ್ಲಿನ ಕೃಷಿ ಚಟುವಟಿಕೆ, ಹಸಿವಿನ ವಿಚಾರಗಳಿಗೆ ನಾವೇಕೆ ಆದ್ಯತೆಯನ್ನು ನೀಡುತ್ತಿಲ್ಲವೆಂದು ಅವರು ಪ್ರಶ್ನಿಸಿದರು.ಪತ್ರಿಕಾ ದಿನಾಚರಣೆಯ ಸಂದರ್ಭ ನಮ್ಮ ಆತ್ಮಾವಲೋಕನಕ್ಕೆ ಬದಲಾಗಿ ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯವಾಗಿದೆ. ಅತ್ಯಂತ ಅತಿರೇಕದ ಸಂದಿಗ್ಧ ಸಂದರ್ಭದಲ್ಲಿ ನಾವಿದ್ದೇವೆಂದು ಎಚ್ಚರಿಕೆಯ ನುಡಿಗಳನ್ನಾಡಿದ ಅವರು, ಇವುಗಳ ನಡುವೆಯೂ ಕೊಡಗಿನ ಪತ್ರಿಕೋದ್ಯಮ ಇಂದಿಗೂ ಪ್ರಾಮಾಣಿಕವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಮೆಚ್ಚುಗೆಯ ನುಡಿಗಳನ್ನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆ ಪತ್ರಿಕಾ ಕ್ಷೇತ್ರದ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಪ್ರಸ್ತುತ ಆನ್ ಲೈನ್‌ಗಳಲ್ಲು ಸುದ್ದಿಗಳು ಜನರಿಗೆ ತಲುಪಬಲ್ಲುದಾದರು, ಪತ್ರಿಕೆಯ ಓದಿನ ಸಂತೋಷ ಮತ್ತು ಅನುಭವ ಬೇರೆಯೆ ತೆರನಾದದ್ದು ಎಂದು ತಿಳಿಸಿ, ಯಾವುದೇ ಸುದ್ದಿಗಳನ್ನು ಮಾಡುವ ಸಂದರ್ಭ ಪತ್ರಕರ್ತರು ‘ಫೈ ಡಬ್ಲ್ಯು ಒನ್ ಹೆಚ್’ ಅಂದರೆ ಯಾರು, ಯಾವಾಗ, ಏನು, ಏತಕ್ಕಾಗಿ, ಎಲ್ಲಿ ಮತ್ತು ಹೇಗೆ ಎನ್ನುವ ವಿಚಾರಗಳತ್ತ ಗಮನವನ್ನು ಕೇಂದ್ರೀಕರಿಸುವುದು ಅವಶ್ಯ ಈ ಅಂಶಗಳು ಸೇರಿದಾಗ ಮಾತ್ರ ಒಂದು ಸುದ್ದಿ ರಚನೆಯಾಗುತ್ತದೆಂದು ತಿಳಿಸಿದರು.
ಪ್ರಸ್ತುತ ಬಂಡವಾಳಶಾಹಿಗಳು ಪತ್ರ‍್ರಿಕೆಗಳನ್ನು ನಡೆಸುವ ಹಂತವನ್ನು ಕಾಣುತ್ತಿದ್ದು, ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆಯಲ್ಲದೆ ಪತ್ರಿಕಾ ಸ್ವಾತಂತ್ರ್ಯಕ್ಕೂ ಧಕ್ಕೆಯನ್ನುಂಟುಮಾಡುವ ಸಾಧ್ಯತೆ ಇರುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ- ಸಮಾರಂಭದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಂಟಿಕೊಪ್ಪ ವರದಿಗಾರರಾದ ಕೆ.ಹೆಚ್.ಶಿವಣ್ಣ, ಸುದ್ದಿ ಸಂಸ್ಥೆಯ ಸಂಪಾದಕರಾದ ಟಿ.ಎಲ್.ಶ್ರೀನಿವಾಸ್ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾದ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಗೌರವಿಸಿದರು.
ಸಂಘದ ಸದಸ್ಯ ರಜತ್ ರಾಜ್ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು. ಸಂಘದ ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮವನ್ನು ನಿರೂಪಿಸಿದರೆ, ಸನ್ಮಾನಿತರ ಪರಿಚಯವನ್ನು ಸಂಘದ ಸದಸ್ಯ ರಂಜಿತ್ ಕವಲಪಾರ, ಶಿವಪ್ಪ, ಉಪಾಧ್ಯಕ್ಷ ಜಿ.ವಿ. ರವಿ ಕುಮಾರ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕುಶಾಲನಗರ ಘಟಕದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾಡಿಕೊಟ್ಟರು. ಮುಖ್ಯ ಭಾಷಣಕಾರರ ಪರಿಚಯವನ್ನು ಪಿ.ಎಂ.ರವಿ ಮಾಡಿದರು. ವಿರಾಜಪೇಟೆ ಘಟಕದ ಅಧ್ಯಕ್ಷ ಮಧೋಷ್ ಪೂವಯ್ಯ ವಂದಿಸಿದರು.