ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ ಅನಗವಾಡಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ಬಸ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ದೇಹದಿಂದ ಕೈ ಬೇರ್ಪಟ್ಟು ಬೇರೆಡೆ ಬಿದ್ದದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಅನಗವಾಡಿ ಕೆಇಬಿ ಹತ್ತಿರ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ವಿಜಯಪುರ ಕಡೆಯಿಂದ ಗದ್ದನಕೇರಿ ಕ್ರಾಸ್ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಲಾರಿಯ ಚಾಲಕ ಎದುರಿನಿಂದ ವಿಜಯಪುರ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಬಲಗಡೆಯ ಹಿಂಭಾಗಕ್ಕೆ ಲಾರಿ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಬಾಗಲಕೋಟೆ ತಾಲೂಕಿನ ಸಿಮೀಕೇರಿ ಗ್ರಾಮದ ನಿವಾಸಿ ವಾಣಿ ದೇಸಾಯಿ (29), ಗದಗ ಜಿಲ್ಲೆಯ ನರಗುಂದ ತಾಲೂಕಿನ ಬನ್ನಟ್ಟಿಯ ಶಿವಾನಂದ ಕೊಡ್ಲಿವಾಡ (28) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಬಸ್ಸನಲ್ಲಿದ್ದ ಐವರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಪೊಲೀಸರು ಗಾಯಾಳುಗಳನ್ನು ಬಾಗಲಕೋಟೆಯ ಕಟ್ಟಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಾಗಲಕೋಟೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಜಗದೀಶ ಹಾಗೂ ಬೀಳಗಿ ಸಿಪಿಐ ಹನಮಂತ ಸಣಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಭೀಕರ ಅಪಘಾತದ ಕುರಿತು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ವಶಕ್ಕೆ ಪಡೆಯಲಾಗಿದೆ.


ಶಾಸಕ ಜೆಟಿಪಿ ಸಾಂತ್ವನ: ಅನಗವಾಡಿಯ ಕೆಇಬಿ ಹತ್ತಿರ ಎನ್‌ಎಚ್-218ರಲ್ಲಿ ಸಂಭವಿಸಿದ ಬಸ್-ಲಾರಿ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಅರಿತ ಶಾಸಕ ಜೆ.ಟಿ.ಪಾಟೀಲ ಅವರು ಸಿಪಿಐ ಅವರಿಗೆ ದೂರವಾಣಿ ಕರೆ ಮಾಡಿ ಅಪಘಾತದಲ್ಲಿ ಗಾಯಗೊಂಡಿರುವವರ ಕುರಿತು ಕಾಳಜಿ ವಹಿಸಬೇಕು ಎಂದು ಸೂಚಿಸಿದರು. ಅಪಘಾತದಲ್ಲಿ ಮಡಿದ ಇಬ್ಬರ ಆತ್ಮಕ್ಕೆ ಸಂತಾಪ ಸೂಚಿಸಿ, ಬೆಂಗಳೂರಿನಿಂದ ಬಾಗಲಕೋಟೆಗೆ ಬಂದ ಬಳಿಕ ಸೀಮಿಕೇರಿಗೆ ತೆರಳಿ ಮೃತಳ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವುದರ ಜೊತೆಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.