ಕನ್ನಡಪ್ರಭ ವಾರ್ತೆ ರಾಮದುರ್ಗ
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು, ಗುಣತ್ಮಕ ಶಿಕ್ಷಣಕ್ಕೆ ಉತ್ತಮ ಸಂಸ್ಕಾರ ದೊರೆತರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಹೇಳಿದರು.ಪಟ್ಟಣದ ಬಸವ ಗಾರ್ಡನ್‌ದಲ್ಲಿ ಬಣಜಿಗ ಸಮಾಜದ ತಾಲೂಕು ಘಟಕ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಸವಶ್ರೀ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಬಣಜಿಗ ಸಮಾಜದ ಸಂಘಟನೆ ಮತ್ತೊಂದು ಸಮಾಜದೊಂದಿಗೆ ಸಂಘರ್ಷಕ್ಕಾಗಿ ಅಲ್ಲ, ಎಲ್ಲ ಸಮಾಜದೊಂದಿಗೆ ಸೌಹಾರ್ದ ಜೀವನಕ್ಕಾಗಿ ಎಂದು ತಿಳಿಸಿದರು.
ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ, ವಿದ್ಯಾನಿಧಿ ಸ್ಥಾಪನೆಯ ಯೋಜನೆ ಜಾರಿಗೆ ಯೋಜನೆ ಹಾಕಿಕೊಂಡಿದೆ. ಶೀಘ್ರ ರಾಜ್ಯಾಧ್ಯಂತ ಬಡ ವಿದ್ಯಾರ್ಥಿಗಳಗೆ ಅಗತ್ಯ ನೆರವು ಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಹಿಂದುಸ್ತಾನಿ ಗಾಯಕ ಡಾ.ಮೃತ್ಯುಂಜಯ ಶೆಟ್ಟರ ಮಾತನಾಡಿ, ಬಸವಾದಿ ಶರಣರ ವಾರಸದಾರರಾದ ಬಣಜಿಗರು ಶಿವ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವ್ಯಾಪಾರದೊಂದಿಗೆ ಜೀವನ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ ಶಿಕ್ಷಣ ಕ್ಷೇತ್ರ ಸೇರಿ ವಿವಿಧ ರಂಗಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ ಮಾತನಾಡಿ, ಲಿಂಗಾಯತ ಒಳ ಪಂಗಡಗಳು ಸರ್ಕಾರದ ಸೌಲಭ್ಯಕ್ಕೆ ಸಂಘಟಿತರಾಗಲಿ, ಅದರೆ ಎಲ್ಲ ಲಿಂಗಾಯತರು ಬಸವಣ್ಣನವರ ಆಶಯದಂತೆ ಸರ್ವರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಮನವಿ ಮಾಡಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಜೊತೆಗೆ ಸಂಕಷ್ಟದಲ್ಲಿರುವ ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಂಘಟನೆ ಶ್ರಮಿಸಬೇಕು. ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿನಂತೆ ತಾಯಂದಿರು ಮಕ್ಕಳಗೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಶ್ರಮಿಸಬೇಕು. ಅಂದಾಗ ಮಾತ್ರ ಒಳ್ಳೆಯ ಜನರನ್ನು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.ತಾಲೂಕು ಘಟಕದ ಅಧ್ಯಕ್ಷ ಶಶಿಧರ ಮಾಳವಾಡ ಅಧ್ಯಕ್ಷತೆ ವಹಿಸಿದ್ದರು. ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ ಉದೋಶಿ, ಗೌರವಾಧ್ಯಕ್ಷ ಹಂಪಣ್ಣವರ, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಪುಠಾಣಿ, ಯುವ ಘಟಕದ ಅಧ್ಯಕ್ಷ ಸಂಜಯ ಆರಿಬೆಂಚಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷ ಶಿವಯೋಗಿ ಚಿಕ್ಕೋಡಿ ಸ್ವಾಗತಿಸಿದರು, ಪ್ರೊ.ಎಸ್.ಎಂ.ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಬಂತಿ ನಿರೂಪಿಸಿದರು. ಉಮೇಶ ಗೋಲನ್ನವರ ವಂದಿಸಿದರು.