ಓರವಿಲ್ಲ್ ಫರ್ನಾಂಡೀಸ್
ಆಯೋಧ್ಯೆಯಲ್ಲಿ ಜ. 14ರಿಂದ ಮಾರ್ಚ್ 25ರ ವರೆಗೆ ನಡೆಯಲಿರುವ ರಾಮೋತ್ಸವದಲ್ಲಿ ಸಿದ್ದಪ್ಪ ಬಿರಾದಾರ ಅವರ ಹೊಂಗಿರಣ ಕಲಾತಂಡದ ಸೂತ್ರದ ಗೊಂಬೆಯಾಟವನ್ನು ನಾಗಪುರದ ಕೇಂದ್ರ ಸರ್ಕಾರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ಆಯ್ಕೆ ಮಾಡಿ ಪತ್ರವನ್ನು ಕಳಿಸಿದ್ದು ಕಲಾತಂಡಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸೀತಾಪಹರಣ ಸೂತ್ರದ ಗೊಂಬೆಯಾಟ ಪ್ರದರ್ಶನಕ್ಕೆ ಒಂದು ಗಂಟೆಯ ಅವಕಾಶ ನೀಡಲಾಗಿದ್ದು, ಒಟ್ಟು ಐದು ಪ್ರದರ್ಶನಗಳನ್ನು ಈ ಹೊಂಗಿರಣ ಕಲಾತಂಡವು ನೀಡಲಿದೆ. ಗೊಂಬೆಯಾಟ ಟೀಮ್:ಬಿರಾದಾರ್ ಮೇಷ್ಟು ಈಗಾಗಲೇ ತಂತ್ರಜ್ಞರು ಸೇರಿ 15 ಜನರ ತಂಡ ರಚಿಸಿದ್ದು, ಇದರಲ್ಲಿ ಹಳೆಯ ವಿದ್ಯಾರ್ಥಿಗಳಾದ ನಾರಾಯಣ, ಸೂರಜ್, ಪ್ರಿಯಾಂಕ, ಫಕೀರ, ನಿಶಿತಾ, ಕಾರ್ತಿಕ, ಗಜಾನನ್, ರಾಘವೇಂದ್ರ, ಅಭಿಷೇಕ ಸೂತ್ರದ ಗೊಂಬೆ ಆಡಿಸಲಿದ್ದು, ಸೀತಾಪಹರಣ ಸೂತ್ರದ ಗೊಂಬೆಯಾಟಕ್ಕೆ ವಿಯಪುರದ ದಂಡಪ್ಪಗೌಡ ಪಾಟೀಲ ಸಾಹಿತ್ಯ ಬರೆದಿದ್ದು, ಶಿರಸಿಯ ವಿಶ್ವನಾಥ ಹಿರೇಮಠ ಸಂಗೀತ ನಿರ್ದೇಶನ ನೀಡಿದ್ದಾರೆ. ಗಂಗಾಧರ ನಾಯ್ಕ ಹಿನ್ನಲೆ ಗಾಯನ ಹಾಡಲಿದ್ದು, ತಬಲಾ ಯಲ್ಲಪ್ಪ ಭಜಂತ್ರಿ ಹಾಗೂ ರಿದಂ ಪ್ಯಾಡನ್ನು ಗಣೇಶ ಅರಳಿಕಟ್ಟೆ ನುಡಿಸಲಿದ್ದು, ಸಿದ್ದಪ್ಪ ಬಿರಾದಾರ ಅವರು ನಿರ್ದೇಶನ ನೀಡಲಿದ್ದಾರೆ
ಹಳ್ಳಿಯಲ್ಲಿ ಸಂಭ್ರಮ:ಅಯೋಧ್ಯೆಯ ರಾಮೋತ್ಸವದಲ್ಲಿ ಹೊಂಗಿರಣ ಕಲಾ ತಂಡಕ್ಕೆ ಅವಕಾಶ ಲಭಿಸಿದಲ್ಲದೇ, ಈ ಸೂತ್ರದ ಗೊಂಬೆಯಾಟ ಪ್ರದರ್ಶನದಲ್ಲಿ ಹಳ್ಳಿ ಹುಡುಗರಿಗೂ ಅವಕಾಶ ಲಭಿಸಿದ ಸುದ್ದಿ ಕೇಳಿ ಗ್ರಾಮೀಣ ಭಾಗದ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ. ನಿತ್ಯವೂ ಗೊಂಬೆಯಾಟದ ಮೇಷ್ಟ್ರು ಬಿರಾದಾರ್ ಅವರನ್ನು ಅಭಿನಂದಿಸಲು ಹಳ್ಳಿ ಜನರು ಹಿಂಡು ಹಿಂಡಾಗಿ ಬರಲಾರಂಭಿಸಿದ್ದಾರೆ.ವೈಜ್ಞಾನಿಕ, ಪರಿಸರ ವಿಷಯಕ್ಕೆ ಆಧಾರಿತ ಸೂತ್ರದ ಗೊಂಬೆಯಾಟ ಪ್ರದರ್ಶನ ನೀಡಿದ್ದೇವೆ. ರಾಮಾಯಣಕ್ಕೆ ಸಂಬಂಧಿಸಿದಂತೆ ವಾಲಿ-ಸುಗ್ರೀವ, ಶಬರಿ ಹಾಗೂ ಸೀತಾಪಹರಣ ಗೊಂಬೆಯಾಟವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ. ರಾಮೋತ್ಸವದಲ್ಲಿ ನೀಡುವ ಪ್ರದರ್ಶನಕ್ಕಾಗಿ ಹೊಸ ಸೂತ್ರದ ಗೊಂಬೆ ಸಿದ್ಧಪಡಿಸಲಾಗುತ್ತಿದ್ದು, ಪ್ರದರ್ಶನದ ರಂಗತಾಲಿಮನ್ನು ಆರಂಭಿಸಿದ್ದೇವೆ. ರಾಮೋತ್ಸವದಲ್ಲಿ ಪಾಲ್ಗೊಳ್ಳುವುದು ನಮಗೆಲ್ಲ ಹೊಸ ಅನುಭವ ಎಂದು ಸಿದ್ದಪ್ಪ ಬಿರಾದಾರ ಹೇಳಿದರು.