ಕೋಡಂಬೂರು: ಅಯೋಧ್ಯ ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮ

KannadaprabhaNewsNetwork |  
Published : Dec 14, 2023, 01:30 AM IST

ಸಾರಾಂಶ

ಬೆಳಗ್ಗೆ 9 ಗಂಟೆಗೆ ಮಂತ್ರಾಕ್ಷತೆಯು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚಂಡೆ ವಾದ್ಯ ಸಮೇತ ಗ್ರಾಮಸ್ಥರು, ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಮಂತ್ರಾಕ್ಷತೆಗೆ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ನಡೆದ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಯೋಧ್ಯೆಯಿಂದ ತರಲಾಗಿರುವ ಪವಿತ್ರವಾದ ಮಂತ್ರಾಕ್ಷತೆಯನ್ನು ಮಡಿಕೇರಿ ಗ್ರಾಮಾಂತರ ತಾಲೂಕಿನ ಪ್ರತೀ ಬೂತ್ ಗಳಿಗೂ ತಲುಪಿಸುವ ಕಾರ್ಯಕ್ರಮವು ಮೂರ್ನಾಡು ಸಮೀಪದ ಕೋಡಂಬೂರು ಶ್ರೀ ಭದ್ರಕಾಳಿ ದೇವಾಲಯದಲ್ಲಿ ನೆರವೇರಿತು.

ಬೆಳಗ್ಗೆ 9 ಗಂಟೆಗೆ ಮಂತ್ರಾಕ್ಷತೆಯು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚಂಡೆ ವಾದ್ಯ ಸಮೇತ ಗ್ರಾಮಸ್ಥರು, ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಮಂತ್ರಾಕ್ಷತೆಗೆ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ನಡೆದ ಸಭಾ ಕಾರ್ಯಕ್ರಮ ನಡೆಯಿತು.

ಬಜರಂಗದಳದ ವಿಭಾಗ ಸಹ ಸಂಯೋಜಕ್ ಮುರುಳಿಕೃಷ್ಣ ಮಾತನಾಡಿ, 500 ವರ್ಷಗಳ ಅಯೋಧ್ಯ ಶ್ರೀರಾಮ ಮಂದಿರದ ಹೋರಾಟ ಹಾಗೂ ತ್ಯಾಗ ಬಲಿದಾನಗಳನ್ನು ವಿವರಿಸಿದರು. ಆರ್.ಎಸ್.ಎಸ್. ನ ಮಂಗಳೂರು ವಿಭಾಗ ಸಹ ಕಾರ್ಯವಾಹ ಹರಿಕೃಷ್ಣ ಮಾತನಾಡಿ, ಅಯೋಧ್ಯಪತಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆ ನಮ್ಮ ಜೀವಿತಾವಧಿಯಲ್ಲಿ ನಡೆಯುತ್ತಿರುವುದು ಹಾಗೂ ಶ್ರೀರಾಮನ ಕಾರ್ಯದಲ್ಲಿ ನಮಗೆಲ್ಲರಿಗೂ ಭಾಗಿಗಳಾಗಲು ಅವಕಾಶ ಸಿಕ್ಕಿರುವುದನ್ನು ಶ್ರದ್ಧಾಭಕ್ತಿಯಿಂದ ಮಾಡುವಂತಾಗಬೇಕೆಂದರು.

ಇಡೀ ಸಮಾಜವನ್ನು ಒಂದುಗೂಡಿಸಿಕೊಂಡು ಪ್ರತೀ ಮನೆಗಳಿಗೂ ಅಯೋಧ್ಯ ಮಂತ್ರಾಕ್ಷತೆ ತಲುಪಿಸುವುದು ಹಾಗೂ ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾವಿಧಿವಿಧಾನಗಳನ್ನು ನಾವೆಲ್ಲರೂ ಕಣ್ತುಂಬಿಕೊಂಡು ನಾಡಿನ ಎಲ್ಲಾ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಪೂಜಾಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಶಿವರಾಜ್ ಹಾಗೂ ವಿ.ಎಚ್.ಪಿ. ಯ ಚಿ.ನಾ.ಸೋಮೇಶ್ ನಿರೂಪಿಸಿದರು. ವಿಶ್ವ ಹಿಂದು ಪರಿಷತ್ - ಬಜರಂಗದಳ , ಹಿಂದು ಜಾಗರಣ ವೇದಿಕೆ,ಬಿ.ಜೆ.ಪಿ. ಸೇರಿದಂತೆ 500 ಕ್ಕೂ ಅಧಿಕ ರಾಮಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಯೋಧ್ಯೆ ಶ್ರೀರಾಮ ಮಂತ್ರಾಕ್ಷತೆಯನ್ನು ತಮ್ಮ ತಮ್ಮ ಗ್ರಾಮದ ಪ್ರತೀ ಮನೆಗಳಿಗೆ ತಲುಪಿಸಲು ದೇವಾಲಯದ ಅರ್ಚಕರಿಂದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ 1990 ಹಾಗೂ 1992 ರ ಕರಸೇವೆಯಲ್ಲಿ ನೇರ ಪಾಲ್ಗೊಂಡಿದ್ದ ಹತ್ತಾರು ಹಿರಿಯ ಕರಸೇವಕರು ಹಾಜರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ