1200 ಚಾಕ್‌ಪೀಸ್‌ನಿಂದ ಅರಳಿದ ಅಯೋಧ್ಯೆ ರಾಮಮಂದಿರ

KannadaprabhaNewsNetwork | Published : Jan 18, 2024 2:04 AM

ಸಾರಾಂಶ

ಗೇರುಸೊಪ್ಪಾ ಬಸಾಕುಳಿಯ ಖ್ಯಾತ ಚಾಕ್ ಫೀಸ್ ಕಲಾವಿದ ಪ್ರದೀಪ್ ಮಂಜುನಾಥ ನಾಯ್ಕ 1200 ಚಾಕ್ ಪೀಸ್ ಬಳಸಿ 25 ದಿನ ನಿರಂತರ ಪ್ರಯತ್ನದ ಫಲವಾಗಿ ರಾಮಮಂದಿರದ ಮಾದರಿ ಕಲಾಕೃತಿ ನಿರ್ಮಾಣವಾಗಿದೆ.

ಹೊನ್ನಾವರ:

ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಖ್ಯಾತ ಚಾಕ್ ಫೀಸ್ ಕಲಾವಿದ ಪ್ರದೀಪ್ ಮಂಜುನಾಥ ನಾಯ್ಕ 1200 ಚಾಕ್ ಪೀಸ್ ಬಳಸಿ 25 ದಿನ ನಿರಂತರ ಪ್ರಯತ್ನದ ಫಲವಾಗಿ ರಾಮಮಂದಿರದ ಮಾದರಿ ಕಲಾಕೃತಿ ನಿರ್ಮಾಣವಾಗಿದೆ.

ಪ್ರದೀಪ್, ಜ. 22ರ ರಾಮಮಂದಿರದ ಉದ್ಘಾಟನೆಯ ದಿನವೇ ತಮ್ಮ ಕಲೆಯನ್ನು ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ ಹಾಗೂ ಶ್ರೀಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ ಅವರಿಂದ ಅನಾವರಣಗೊಳಿಸಲಿದ್ದಾರೆ.ದಾಖಲೆ:2021 ಮೇ 22ರಂದು 18 ಚಾಕ್‌ ಪೀಸ್‌ನಲ್ಲಿ ರಾಷ್ಟ್ರಗೀತೆ ಕೆತ್ತಿ (ಬರೆಯಲಾಗಿದೆ) ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದರು. ಬುದ್ಧ, ಗಾಂಧೀಜಿ, ಐಫೆಲ್ ಟವರ್, ಸೂರ್ಯ ನಮಸ್ಕಾರದ ಆಕೃತಿ. ಹೀಗೆ ಹತ್ತು ಹಲವು ಆಕೃತಿ ಮಾಡಿ ಎಲ್ಲರನ್ನು ಆಕರ್ಷಿಸಿದ್ದರು. ಇದೀಗ 13 ಇಂಚು ಅಗಲ, 20 ಇಂಚು ಉದ್ದ , 15.5 ಇಂಚು ಎತ್ತರದ ಸುತ್ತಳತೆಯಲ್ಲಿ ರಾಮಮಂದಿರ ರಚಿಸಿದ್ದಾರೆ.ಪ್ರಸ್ತುತ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಇವರ ವಿಶೇಷ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ತಮ್ಮ ಧ್ವನಿಯ ಮೂಲಕ Voice of U K Kannadiga ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಜ. 22ರಂದು ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಪ್ರದೀಪ್‌ ಅವರು ಚಾಕ್‌ ಪೀಸ್‌ ಬಳಿಸಿ ರಾಮಮಂದಿರ ಕಲಾಕೃತಿ ರಚಿಸಿದ್ದಾರೆ. ಇವರ ಕಲಾಕೃತಿಗೆ ರಾಮ ಭಕ್ತರಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇವರು ಈಗಾಗಲೇ ಹಲವು ದಾಖಲೆಗಳನ್ನು ಕೈ ಚಳಕದ ಮೂಲಕ ಸೃಷ್ಟಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

Share this article