ಸಾಗರದಲ್ಲೂ ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಸಂಭ್ರಮ

KannadaprabhaNewsNetwork | Published : Jan 23, 2024 1:47 AM

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸೋಮವಾರ ಸಾಗರ ತಾಲೂಕಿನಾದ್ಯಂತ ಸಂಭ್ರಮಾಚರಣೆ ಕಂಡುಬಂತು. ಮನೆ ಮನೆಗಳಲ್ಲಿ ರಾಮೋತ್ಸವ ನಡೆಯಿತು. ಹಲವು ಕಡೆಗಳಲ್ಲಿ ಶ್ರೀರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು. ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಮತಾರಕ ಹವನ, ಅನ್ನ ಸಂತರ್ಪಣೆ ನಡೆಯಿತು. ವಿವಿಧ ಸಂಘಟನೆಗಳಿಂದ ಪಾನಕ, ಕೋಸಂಬರಿ, ಸಿಹಿತಿಂಡಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ಸಂಭ್ರಮಾಚರಣೆ ಕಂಡುಬಂತು. ಎಲ್ಲ ಕಡೆಗಳಲ್ಲಿ ಜನರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಸಾರ್ವತ್ರಿಕವಾಗಿ ರಾಮನ ಪೂಜೆ ಸಲ್ಲಿಸಿದ್ದಲ್ಲದೇ ಮನೆ ಮನೆಗಳಲ್ಲಿ ರಾಮೋತ್ಸವ ನಡೆದಿತ್ತು. ಹಲವು ಕಡೆಗಳಲ್ಲಿ ಶ್ರೀರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು.

ರಾಜ್ಯ ಸರ್ಕಾರ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿರುವುದನ್ನು ಹೊರತುಪಡಿಸಿ, ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಲಾಯಿತು. ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನ, ರಥಬೀದಿಯ ರಾಮಮಂದಿರ, ಅಣಲೆಕೊಪ್ಪದ ಶ್ರೀ ಪ್ರಸಾದ ಗಣಪತಿ ದೇವಸ್ಥಾನ, ಶಿವಪ್ಪನಾಯಕ ನಗರದ ದೈವಜ್ಞ ಸಮಾಜದ ರಾಮ ದೇವಸ್ಥಾನ, ಉಪ್ಪಾರ ಸಮಾಜದ ವೀರಾಂಜನೇಯ ದೇವಸ್ಥಾನ, ಸತ್ಯನಾರಾಯಣಸ್ವಾಮಿ ದೇವಸ್ಥಾನ, ವೆಂಕಟರಮಣಸ್ವಾಮಿ ದೇವಸ್ಥಾನ, ಗುಡಿಗಾರ ಸಮಾಜದ ಶ್ರೀರಾಮ ದೇವಸ್ಥಾನ, ಶಂಗೇರಿ ಶಂಕರಮಠ, ನಗರೇಶ್ವರ ದೇವಸ್ಥಾನ, ಶ್ರೀ ಮಾರಿಕಾಂಬಾ ದೇವಸ್ಥಾನ, ಅಗ್ರಹಾರದ ಕೋದಂಡರಾಮ ದೇವಸ್ಥಾನ, ವರದಹಳ್ಳಿ ಶ್ರೀ ಶ್ರೀಧರಾಶ್ರಮ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಮತಾರಕ ಹವನ, ಅನ್ನ ಸಂತರ್ಪಣೆ ನಡೆಯಿತು. ವಿವಿಧ ಸಂಘಟನೆಗಳಿಂದ ಪಾನಕ, ಕೋಸಂಬರಿ, ಸಿಹಿತಿಂಡಿ ವಿತರಿಸಲಾಯಿತು.

ಪಟ್ಟಣದ ಸುಭಾಷ್ ನಗರ ಚಿಲುಮೆಕಟ್ಟೆ ಭೂತೇಶ್ವರ ದೇವಸ್ಥಾನದ ಸಮೀಪ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳ ವತಿಯಿಂದ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಅನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಸಂಘಟನೆಗಳ ಪ್ರಮುಖರಾದ ಪುರುಷೋತ್ತಮ್, ಕಿರಣ್ ಗೌಡ, ಮೈತ್ರಿ ಪಾಟೀಲ್, ಶೇಖರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಚೇತನ್, ರವೀಂದ್ರ ಬಿ.ಟಿ., ಅರುಣ ಕುಗ್ವೆ, ಸತೀಶ್ ಮೊಗವೀರ ಇನ್ನಿತರರು ಹಾಜರಿದ್ದರು.

- - - ಟಾಪ್‌ ಕೊಟ್‌ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಐತಿಹಾಸಿಕ ಕ್ಷಣವಾಗಿದೆ. ದೇಶವಾಸಿಗಳ ಶತಮಾನದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ರಾಮಜನ್ಮಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನೆರವೇರಿರುವುದು ದೇಶದ ಸನಾತನ ಹಿಂದೂ ಧರ್ಮಗಳ ಶತಶತಮಾನದ ಆಸೆ ಈಡೇರಿದಂತಾಗಿದೆ

- ಪ್ರತಿಮಾ ಜೋಗಿ, ವಿಹಿಂಪ

- - -

-22ಕೆ.ಎಸ್.ಎ.ಜಿ.1:

ಸಾಗರ ಪಟ್ಟಣದ ಅಗ್ರಹಾರದ ಶ್ರೀಕೋದಂಡರಾಮ ದೇವಸ್ಥಾನ ವತಿಯಿಂದ ಬಡಾವಣೆಯಲ್ಲಿ ರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು.

Share this article