ಕನ್ನಡಪ್ರಭ ವಾರ್ತೆ ಮಹದೇವಪುರ (ಬೆಂಗಳೂರು)
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ಶ್ರೀ ಸೀತಾ ರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ನಾಸ್ತಿಕನಲ್ಲ ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳು ಇವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾ ಇದ್ದೇವೆ, ಗುಡಿ ಕಟ್ಟುತ್ತೇವೆ, ಪೂಜಿಸುತ್ತೇವೆ ಎಂದರು.ಯಾವುದೇ ಧರ್ಮ ಜಾತಿ-ಧರ್ಮ ಆಧಾರದ ಮನುಷ್ಯ ದ್ವೇಷವನ್ನು ಹೇಳುವುದಿಲ್ಲ. ಶ್ರೀರಾಮ ಸಮಾಜಮುಖಿ ಆಗಿದ್ದರು. ಒಬ್ಬ ಮಡಿವಾಳನ ಮಾತಿಗೂ ಬೆಲೆ ಕೊಟ್ಟರು. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೋದರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವರೆಲ್ಲಾ ಸಕುಟುಂಬಸ್ಥರು ಎಂದು ವಿವರಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಆಶಯ ಶ್ರೀರಾಮನ ಆದರ್ಶ ಮತ್ತು ವ್ಯಕ್ತಿತ್ವದಲ್ಲಿದೆ. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು ಎನ್ನುವುದೇ ರಾಮಾಯಣ, ಮಹಾಭಾರತದ ಸಂದೇಶ ಎಂದು ವಿವರಿಸಿದರು.
ಸಚಿವ ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಆಯೋಗದ ಉಪಾಧ್ಯಕ್ಷರಾದ ರಾಜು ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.